ಬೆಳಗಾವಿ: 2 ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಾಲ್ಕೈದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ. ಸುರೇಶ್ ಅಂಗಡಿ ಕುಟುಂಬದ ತ್ಯಾಗ ಅರ್ಥ ಮಾಡಿಕೊಂಡು ಮಂಗಳಾ ಅಂಗಡಿ ಅವರಿಗೆ ಮತ ಹಾಕಬೇಕು.
ಅವರ ಶ್ರೀಮತಿಯವರೇ ಚುನಾವಣೆಗೆ ಸ್ಪರ್ಧಿಸಿರುವುದರಿಂದ ಮಂಗಳಾ ಅಂಗಡಿಗೆ ಮತ ನೀಡಬೇಕು ಎಂದು ಮನವಿ ಮಾಡುತ್ತೇನೆ. ಮೊದಲ ಬಾರಿ ಮಹಿಳಾ ಅಭ್ಯರ್ಥಿಯನ್ನು ಈ ಕ್ಷೇತ್ರದಿಂದ ನಿಲ್ಲಿಸಿದ್ದು, ಅವರಿಗೆ ಆಶೀರ್ವದಿಸಬೇಕು. ಇಂದು ಮತ್ತು ನಾಳೆ ಬೆಳಗಾವಿ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡುತ್ತೇನೆ ಎಂದರು.
ಬೆಳಗಾವಿ ಬೈ ಎಲೆಕ್ಷನ್ ಕುರಿತಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ.. ಸೋಲಿನ ಭಯದಿಂದ ಸಿಎಂ ಪ್ರಚಾರಕ್ಕೆ ಬರುತ್ತಿದ್ದಾರೆ ಎಂಬ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ನಾನು ಏನನ್ನೂ ಮಾತನಾಡಲ್ಲ. ಮುಖ್ಯಮಂತ್ರಿ ಆಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಮತದಾರರನ್ನು ಭೇಟಿಯಾಗಿ ನಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಲು ಬಂದಿದ್ದೇನೆ. ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದೇನೆ, ಅವರೂ ಪ್ರಚಾರಕ್ಕೆ ಬರಬಹುದು ಎಂದರು.
ಇದನ್ನೂ ಓದಿ:ಭ್ರಷ್ಟಾಚಾರ ಮಾಡಿದವ್ರು ಉನ್ನತ ಸ್ಥಾನದಲ್ಲಿರುವಾಗ ನಾನೇಕೆ ಸಿಎಂ ಆಗಬಾರದು?: ಯತ್ನಾಳ
ಕೊರೊನಾ ಹೆಚ್ಚಳದಿಂದ ಏ. 18 ರಂದು ಸಂಜೆ 4ಕ್ಕೆ ಪ್ರತಿಪಕ್ಷ ನಾಯಕರ ಸಭೆ ಕರೆದಿದ್ದೇನೆ. ಪ್ರತಿ ಪಕ್ಷ ನಾಯಕರ ಸಲಹೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ಯಾವ್ಯಾವ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಿದೆ ಅಲ್ಲೂ ಸಹ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.