ಚಿಕ್ಕೋಡಿ: ಕಾಗವಾಡದ ರಾಜು ಕಾಗೆ ಜೊತೆಗೆ ಗೋಕಾಕ್ನ ಅಶೋಕ ಪೂಜಾರಿ ಕಮಲದಿಂದ ಜಿಗಿಯಲು ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಈಗಾಗಲೇ ಎರಡು ಮತಕ್ಷೇತ್ರಗಳ ಮತದಾರರನ್ನು ಕಾಡುತ್ತಿದೆ.
ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಇದು ಹೌದು ಎನ್ನುವಂತೆ ಕಾಣುತ್ತಿದೆ. ಕಾಗೆಯವರಂತೂ ಇಷ್ಟರಲ್ಲೇ ಕಾಂಗ್ರೆಸ್ ಸೇವರು ಸಾಧ್ಯತೆ ಇದೆ ಎಂದು ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಅನರ್ಹ ಶಾಸಕ ಶ್ರೀಮಂತ ಪಾಟೀಲಗೆ ಟಿಕೆಟ್ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜು ಕಾಗೆ ಅವರು ಸಿಎಂ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದಾರೆ. ಅಲ್ಲದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿ ಚುನಾವಣೆಗೆ ಸ್ಪರ್ಧಿಸಲು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಮುಖಂಡ ಡಿಕೆಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕಾಂಗ್ರೆಸ್ನಿಂದ ರಾಜು ಕಾಗೆ ಅವರಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಗೋಕಾಕ್ ಬಿಜೆಪಿ ನಾಯಕ ಅಶೋಕ್ ಪೂಜಾರಿ ಕೂಡಾ ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅನರ್ಹತೆಯಿಂದ ತೆರವಾಗಿರುವ ಗೋಕಾಕ್ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಲು ಅಶೋಕ್ ಪೂಜಾರಿ ಸಿದ್ಧತೆ ನಡೆಸುತ್ತಿದ್ದಾರೆ. ಇವರು ಕಳೆದ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿಗೆ ಟಿಕೆಟ್ ನೀಡುತ್ತಿರುವ ಹಿನ್ನೆಲೆಯಲ್ಲಿ ಪೂಜಾರಿ ಕಾಂಗ್ರೆಸ್ ಬಾಗಿಲು ಬಡಿಯಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಗೋಕಾಕ್ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಇವರಿಬ್ಬರೂ ಬಿಜೆಪಿ ನಾಯಕರಾಗಿದ್ದು, ಕಾಗವಾಡ, ಗೋಕಾಕ್ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಂಡಾಯ ಏಳದಂತೆ ಸಿಎಂ ಯಡಿಯೂರಪ್ಪ ಇವಬ್ಬರಿಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಕೊಟ್ಟಿದ್ದರೂ ಅದನ್ನು ಇವರು ನಿರಾಕರಿಸಿ ಹೋಗುತ್ತಿದ್ದಾರೆ.
ಉಪ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ರಾಜು ಕಾಗೆ, ಅಶೋಕ ಪೂಜಾರಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತಾ, ಇಲ್ಲವೇ ಬಂಡಾಯ ಕಹಳೆ ಉದುತ್ತಾರಾ ಎಂದು ಕಾದು ನೋಡಬೇಕಿದೆ.