ಬೆಳಗಾವಿ: ನಾವು ಕರ್ನಾಟಕದ ಪರ ಕೇಂದ್ರದಿಂದ ಏನೇನು ಕೇಳಬೇಕಾಗಿದೆಯೋ ಅದನ್ನು ಕೇಳುತ್ತೇವೆ. ನೀವು ಬೇಕಾಬಿಟ್ಟಿ, ಪ್ಲಾನ್ ಇಲ್ಲದೇ ಘೋಷಣೆ ಮಾಡಿದ್ದೀರಲ್ಲ, ಅದಕ್ಕೆ ನೀವೇ ಹೊಣೆಗಾರರು. ಜವಾಬ್ದಾರಿ ಹೊತ್ತಿರುವ ನೀವು ಅದನ್ನು ನಿಭಾಯಿಸಬೇಕೆಂದು ರಾಜ್ಯ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.
ಬೆಳಗಾವಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ಕರ್ನಾಟಕ ಮುಖ್ಯವಲ್ಲ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯಲ್ಲಿದೆ. ದೇಶದ ಎಲ್ಲ ರಾಜ್ಯಗಳ ಬಗ್ಗೆಯೂ ಸಮಾನಾಂತರವಾಗಿ ಅಧಿಕಾರ ನಡೆಸಬೇಕಾಗುತ್ತದೆ. ಸೌಲತ್ತುಗಳನ್ನು ನೀಡಬೇಕಾಗುತ್ತದೆ. ಈ ರಾಜ್ಯದಲ್ಲಿ ಅಕ್ಕಿ ಘೋಷಣೆ ಮಾಡುವ ಮುನ್ನ ಅವರು ಯೋಚಿಸಬೇಕಿತ್ತು. ಅಕ್ಕಿಯನ್ನು ಎಲ್ಲಿಂದ ತರಬೇಕು? ಯಾರ ಜೊತೆ ಮಾತಾಡಬೇಕೆಂದು ಯೋಚನೆ ಮಾಡದೇ, ಪೂರ್ವಾಪರ ತಯಾರಿ ಇಲ್ಲದೇ, ಈಗ ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಕ್ರಮ ತಪ್ಪು ಎಂದು ಕಿಡಿಕಾರಿದರು.
ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಆಯಾ ರಾಜ್ಯದವರು ತಮಗೆ ಬೇಕಾದ ಹಾಗೆ ಅಕ್ಕಿ ಕೊಡುತ್ತೇವೆಂದು ಘೋಷಣೆ ಮಾಡಿ, ಕೇಂದ್ರಕ್ಕೆ ಬಂದು ನೀವು ಕೊಡಲಿಲ್ಲ ಎಂದು ಯಾಕೆ ಹೇಳುತ್ತಾರೆ?, ಅದಕ್ಕೆ ಬೇಕಾದ ಸಿದ್ಧತೆಯನ್ನು ಅವರು ಮಾಡಿಕೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದ ಈರಣ್ಣ ಕಡಾಡಿ, ಕರ್ನಾಟಕ ಜನತೆ ಹಕ್ಕು ಚ್ಯುತಿ ಆದಾಗ ನಾವು ಮಾತನಾಡುತ್ತೇವೆ. ಕಳೆದ ಎರಡ್ಮೂರು ವರ್ಷಗಳಿಂದ ದೇಶದಲ್ಲಿ ಈಗಾಗಲೇ 80 ಕೋಟಿ ಜನರಿಗೆ ಉಚಿತವಾಗಿ ನಾವು ಐದು ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಅಂತ್ಯೋದಯ ಅನ್ನ ಯೋಜನೆಯಡಿ 35 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಹೀಗಾಗಿ ನೀವು ಹತ್ತು ಕೆಜಿ ಕೊಡುತ್ತೇವೆ ಎಂದಿದ್ದಿರಿ, ಎಲ್ಲ ಸೇರಿ ಹದಿನೈದು ಕೆಜಿ ಅಕ್ಕಿ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗದಿರುವುದು ದುರಂತ ಎಂಬ ಮಾಧ್ಯಮಗಳ ಪ್ರಶ್ನೆಗೆ, ಪಾಪ ಅವರು ಏನು ಘೋಷಣೆ ಮಾಡಿದ್ದಾರಲ್ಲ. ಐದು ಯೋಜನೆಗಳನ್ನು ಕೊಡುವಾಗ ಪ್ರಾರಂಭದಲ್ಲೇ ಮುಗ್ಗರಿಸಿ ಬಿದ್ದಿದ್ದಾರೆ. ಅದರಿಂದ ಮೊದಲು ಎದ್ದು ಬರಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದ ಕಡಾಡಿ, ಸರ್ಕಾರ ಅಲುಗಾಡದಂತೆ ನಾವು ಮಾಡುತ್ತೇವೆ. ಕಾಂಗ್ರೆಸ್ ಕೊಟ್ಟಿರುವ ವಾಗ್ದಾನ್ಗಳನ್ನು ಈಡೇರಿಸುವವರೆಗೂ ನಾವು ಬಿಡೋದಿಲ್ಲ. ಕಾಂಗ್ರೆಸ್ ಜನರಿಗೆ ನೀಡಿದ ಭರವಸೆ ಈಡೇರಿಸುವವರೆಗೂ ವಿರೋಧ ಪಕ್ಷವಾಗಿ ಕಾವಲು ನಾಯಿಯಾಗಿ ಅವರನ್ನು ಕಾಯುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.