ಬೆಳಗಾವಿ: ವಿಧಾನಸಭೆ ಚುನಾವಣೆಗೆ ಮತದಾನ ಮುಗಿದಿದ್ದು, ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ರಾಜ್ಯದಲ್ಲೇ ಎರಡನೇ ಅತೀ ಹೆಚ್ಚು ಮತಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಮತ ಎಣಿಕೆಗೆ ಎಲ್ಲ ರೀತಿಯ ಸಿದ್ಧತೆ ನಡೆದಿದ್ದು, ಮತ ಎಣಿಕೆ ನಡೆಯಲಿರುವ ನಗರದ ರಾಣಿ ಪಾರ್ವತಿದೇವಿ ಕಾಲೇಜಿನ ಸ್ಟ್ರಾಂಗ್ ರೂಮ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪೊಲೀಸ್ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ದೊಡ್ಡ ಮತ ಎಣಿಕೆ ಕೇಂದ್ರ ಆರ್ಪಿಡಿ ಕಾಲೇಜಿನಲ್ಲಿ ಮಾಡಲಾಗಿದೆ. ಮೊದಲಿಗೆ 8 ಗಂಟೆಗೆ ಅಂಚೆ ಮತಗಳನ್ನು ಎಣಿಕೆ ಮಾಡಲಾಗುವುದು. 8.30ರಿಂದ ಇವಿಎಂ ಮತ ಎಣಿಕೆ ಪ್ರಾರಂಭವಾಗುತ್ತದೆ. ಒಂದು ಟೇಬಲ್ನಲ್ಲಿ 500 ಮತಗಳನ್ನು ಎಣಿಕೆ ಮಾಡಲು ಸಾಧ್ಯವಾಗುತ್ತದೆ. ಮಧ್ಯಾಹ್ನದವರೆಗೆ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ ಎಂದರು.
ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಮಾಡಬಹುದು: 4 ಹಂತದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಒಳಗಡೆ ಸಶಸ್ತ್ರ ಸೀಮಾ ಪಡೆ ಇದೆ. ಎರಡನೇ ಹಂತದಲ್ಲಿ ಕೆಎಸ್ಆರ್ಪಿ, ಮೂರನೇ ಹಂತದಲ್ಲಿ ನಮ್ಮ ರಾಜ್ಯದ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಇನ್ನು ಗುರುತಿನ ಚೀಟಿ ಇಲ್ಲದೇ ಯಾರಿಗೂ ಒಳಗಡೆ ಬಿಡುವುದಿಲ್ಲ. ಸುಮಾರು 5 ಸಾವಿರ ಜನ ಇರುವುದರಿಂದ ಏಜೆಂಟ್ರಿಗೂ ಗುರುತಿನ ಚೀಟಿ ನೀಡಲಾಗಿದೆ. 200 ಮೀಟರ್ ಹೊರಗಡೆ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಮಾಡಬಹುದು ಎಂದ ಜಿಲ್ಲಾಧಿಕಾರಿ, ಸರಾಸರಿ 22-23 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಪ್ರತಿ ವಿಧಾನಸಭೆ ಕ್ಷೇತ್ರಕ್ಕೂ ಬೇರೆ ಬೇರೆ ಸುತ್ತುಗಳು ಇರುತ್ತವೆ. ಅತೀ ಹೆಚ್ಚು ಬೆಳಗಾವಿ ಗ್ರಾಮೀಣ ಕ್ಷೇತ್ರವು 29 ಸುತ್ತು ಹೊಂದಿದೆ ಎಂದರು.