ಬೆಳಗಾವಿ : ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೆ ಬರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಆತಿಥ್ಯ ನೀಡಲು ಜಿಲ್ಲೆಯ ರೈತರು ಸಜ್ಜಾಗಿದ್ದಾರೆ. ಭೀಕರ ಬರಗಾಲ ಹಿನ್ನೆಲೆ ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿವೇಶನ ಮುಗಿಯೋವರೆಗೂ ನಮ್ಮ ಮನೆಯಲ್ಲಿ ಇರುವಂತೆ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.
ಕಂಡು ಕೇಳರಿಯದ ಬರಗಾಲ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಅದರಲ್ಲೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕ್ಷೇತ್ರಗಳಿಗೆ ಅನುದಾನ ನೀಡಲು ಸರ್ಕಾರ ಪರದಾಡುತ್ತಿದೆ. ಈ ನಡುವೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ ತಿಂಗಳಲ್ಲಿ ಚಳಿಗಾಲ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಇನ್ನು ಅಧಿವೇಶನಕ್ಕೆ ಬರುವ ಶಾಸಕರು, ಮಂತ್ರಿ ಮಹೋದಯರು ಮತ್ತು ಅಧಿಕಾರ ವರ್ಗ ಉಳಿದುಕೊಳ್ಳಲು, ಊಟ - ಉಪಚಾರಕ್ಕೆ ಕೋಟಿ, ಕೋಟಿ ಖರ್ಚಾಗುತ್ತದೆ. ಈ ಆರ್ಥಿಕ ಹೊರೆ ತಗ್ಗಿಸಲು ಬೆಳಗಾವಿ ಜಿಲ್ಲೆಯ ರೈತ ಮುಖಂಡರು ಮತ್ತು ರೈತರು ಮುಖ್ಯಮಂತ್ರಿ ಸಹಿತ, ಸಚಿವರು, ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಹಾಗೂ ಪರಿಷತ್ ಸದಸ್ಯರಿಗೆ ತಮ್ಮ ಮನೆಗಳಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.
ಬೆಳಗಾವಿ ತಾಲೂಕಿನ ಹಲಗಾ, ಬಸ್ತವಾಡ, ಕೊಂಡಸಕೊಪ್ಪ, ಕೋಳಿಕೊಪ್ಪ, ಧಾಮನೆ, ಕೆ.ಕೆ.ಕೊಪ್ಪ, ಮಜಗಾವಿ, ಮಚ್ಛೆ, ಹಿರೇಬಾಗೇವಾಡಿ, ಸಾಂಬ್ರಾ, ಕಾಕತಿ, ಬಸ್ಸಾಪುರ, ಅರಳೀಕಟ್ಟಿ, ಚಂದನಹೊಸುರ, ಗಣಿಕೊಪ್ಪ, ಹೊನಗಾ, ಕಡೋಲಿ, ಅಂಬೇವಾಡಿ, ಉಚಗಾಂವ, ಪೀರಣವಾಡಿ, ದೇಸೂರ, ನಂದಿಹಳ್ಳಿ, ಸುಳೇಭಾವಿ, ಮಾರಿಹಾಳ ಸೇರಿ 25 ಹಳ್ಳಿಗಳ 500ಕ್ಕೂ ಹೆಚ್ಚು ಮನೆಗಳಲ್ಲಿ ಅಧಿವೇಶನಕ್ಕೆ ಬರುವರ ಆತಿಥ್ಯಕ್ಕೆ ರೈತರು ತಯಾರಿ ನಡೆಸುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ರೈತ ಮುಖಂಡ ಪ್ರಕಾಶ ನಾಯಿಕ, ಕಳೆದ ಮೂರು ವರ್ಷಗಳಿಂದ ನಾವು ಆಹ್ವಾನಿಸುತ್ತಿದ್ದೇವೆ. ಈ ಬಾರಿ ಬರಗಾಲ ಸ್ಥಿತಿಯಿದೆ. ಕೋಟ್ಯಂತರ ರೂ. ಖರ್ಚು ಮಾಡೋದು ಬೇಡ. ಆ ಹಣ ಬರಗಾಲ ಪರಿಹಾರ ನಿಧಿಗೆ ಉಪಯೋಗ ಆಗಲಿ ಮತ್ತು ರೈತಾಪಿ, ಗ್ರಾಮೀಣ ಪ್ರದೇಶದ ಸ್ಥಿತಿಗತಿ, ಸಂಕಷ್ಟ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. ನಮ್ಮ ಭಾಗದ ತಿಂಡಿ, ತಿನಿಸುಗಳನ್ನು ಅವರಿಗೆ ಪ್ರೀತಿಯಿಂದ ತಿನ್ನಿಸುತ್ತೇವೆ. ನಮ್ಮ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಅವರು ಚರ್ಚಿಸಿ ಪರಿಹರಿಸುವ ಕೆಲಸ ಮಾಡಲಿ. ಒಂದು ವೇಳೆ ನಮ್ಮ ಪ್ರೀತಿಯ ಆಹ್ವಾನ ಸ್ವೀಕರಿಸದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮತ್ತೋರ್ವ ರೈತ ಮುಖಂಡ ಚೂನಪ್ಪ ಪೂಜಾರಿ, ನಮ್ಮ ಮನೆಗೆ ಬರುವ ಜನಪ್ರತಿನಿಧಿಗಳು ಸೇರಿ ಐಎಎಸ್ ಅಧಿಕಾರಿಗಳಿಗೆ ಆರತಿ ಬೆಳಗಿ, ಅಂಗಳದಲ್ಲಿ ರಂಗೋಲಿ ಹಾಕಿ ಅದ್ಧೂರಿಯಾಗಿ ಸ್ವಾಗತಿಸುತ್ತೇವೆ. ಅಲ್ಲದೇ ಅವರ ಪಿಎ, ಗನ್ ಮ್ಯಾನ್ಗಳಿಗೂ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಇದನ್ನು ನೀವು ಸಿಲ್ಲಿ ಎಂದು ತಿಳಿಯಬೇಡಿ. ಈ ಸಂಬಂಧ ಸಭಾಪತಿ ಮತ್ತು ಸಭಾಧ್ಯಕ್ಷರ ಗಮನಕ್ಕೂ ತಂದಿದ್ದು, ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತಿಸಿ ನಮಗೆ ತಿಳಿಸುವಂತೆ ಕೇಳಿಕೊಂಡರು.
ಈಟಿವಿ ಭಾರತ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರನ್ನು ಸಂಪರ್ಕಿಸಿ ಈ ವಿಚಾರ ತಿಳಿಸಿದಾಗ, ರೈತರ ಮನೆಗಳಿಗೆ ಹೋಗಿ ಅವರ ಸಂಕಷ್ಟ ಆಲಿಸುವುದು ನಮಗೂ ಇಷ್ಟ. ಆದರೆ, ಅಧಿವೇಶನ ವೇಳೆ ಒಂದು ದಿನ ರೈತರ ಮನೆಯಲ್ಲಿ ಇರೋದು ಸೂಕ್ತ. ಯಾಕೆಂದರೆ ಹತ್ತು ದಿನವಿದ್ದರೆ ರೈತರಿಗೆ ಬಹಳಷ್ಟು ಸಮಸ್ಯೆ ಆಗುತ್ತದೆ. ಆದರೂ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಈ ಸಲದ ಬೆಳಗಾವಿ ಅಧಿವೇಶನ ಸರ್ವರೂ ಮೆಚ್ಚುವಂತೆ ನಡೆಯಲಿದೆ: ಯು ಟಿ ಖಾದರ್