ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಐಡಿ ಬೆಳಗಾವಿ:ಜಿಲ್ಲೆ ಗ್ರಾಮವೊಂದರಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣವನ್ನು ನಿನ್ನೆಯಷ್ಟೇ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಈ ಪ್ರಕರಣದ ಕುರಿತು ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ನೇತೃತ್ವದ ತಂಡ ಇಂದು (ಸೋಮವಾರ) ತನಿಖೆ ಚುರುಗೊಳಿಸಿದೆ.
ಭಾನುವಾರ ರಾತ್ರಿಯೇ ಬೆಳಗಾವಿಗೆ ಬಂದು ವಾಸ್ತವ್ಯ ಹೂಡಿರುವ ಸಿಐಡಿ ತಂಡವು, ಇಂದು ಬೆಳಗ್ಗೆಯೇ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್ಗೆ ಭೇಟಿ ನೀಡಿ, ಸಂತ್ರಸ್ತ ಮಹಿಳೆಯಿಂದ ಮಾಹಿತಿ ಕಲೆ ಹಾಕಿದೆ. ಸಿಐಡಿ ಎಸ್ಪಿ ಪೃಥ್ವಿಕ್, ರಶ್ಮಿ ಪರಡ್ಡಿ ಹಾಗೂ ಡಿವೈಎಸ್‌ಪಿ ಅಂಜುಮಳ ನಾಯಕ ಸೇರಿ ಆರು ಅಧಿಕಾರಿಗಳ ತಂಡ ಈ ಪ್ರಕರಣದ ತನಿಖೆ ಆರಂಭಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಕೂಡ ಸೋಮವಾರ ಬೆಳಗ್ಗೆ ಬೆಳಗಾವಿಗೆ ಆಗಮಿಸಿದ್ದರು. ದೆಹಲಿಯಿಂದ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ ಬರಮಾಡಿಕೊಂಡಿದ್ದರು. ''ಪ್ರಕರಣ ಸಂಬಂಧ ಮಾಹಿತಿ ಪಡೆಯಲು ಈಗಷ್ಟೇ ಬೆಳಗಾವಿಗೆ ಬಂದಿದ್ದೇನೆ. ಸಂತ್ರಸ್ತೆ ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ, ಪರಿಶೀಲನೆ ನಡೆಸಿದ ಬಳಿಕವೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ'' ಎಂದು ಸುನೀಲಕುಮಾರ್ ಮೀನಾ ತಿಳಿಸಿದ್ದಾರೆ.
ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ಇತ್ತೀಚೆಗೆ ಭೇಟಿ:''ಮಹಿಳೆಯ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಇಡೀ ದೇಶವೇ ಗಮನಿಸುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡದೇ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳದ ಸಿಎಂ ಸಿದ್ದರಾಮಯ್ಯ ದೇಶದ ಮಹಿಳೆಯರ ಕ್ಷಮೆಯಾಗಿಸಬೇಕು'' ಎಂದು ಬಿಜೆಪಿ ಸಂಸದೆ ಸುನಿತಾ ದುಗ್ಗಲ್ ಡಿ.16ರಂದು ಆಗ್ರಹಿಸಿದ್ದರು.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನೊಂದ ಮಹಿಳೆಯ ಆರೋಗ್ಯ ವಿಚಾರಿಸಿದರು. ನಂತರ, ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು. ''ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಲ್ಲಿ ಈ ತರಹದ ಕೃತ್ಯ ನಡೆದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದರೂ ಪೊಲೀಸರು ಯಾಕೆ ತಡವಾಗಿ ಬಂದರು? ಬೀಟ್ ಪೊಲೀಸರು ಎಲ್ಲಿದ್ದರು? ಎಂಬುದರ ಬಗ್ಗೆ ಸರ್ಕಾರ ಉತ್ತರಿಸಬೇಕು. ಸಿಎಂ ಮತ್ತು ಗೃಹ ಸಚಿವರು ಬಹಿರಂಗವಾಗಿ ಮಹಿಳಾ ಸಮುದಾಯದ ಕ್ಷಮೆಯಾಚಿಸಬೇಕು. ಎಲ್ಲ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ಕಿಡಿಕಾರಿದ್ದರು.
ಇದನ್ನೂ ಓದಿ:ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿದ್ದ ಅಪ್ರಾಪ್ತ ಬಾಲಕಿಯರ ರಕ್ಷಣೆ: ಜ್ಯುವೆಲ್ಲರಿ ಶಾಪ್ ಮಾಲೀಕನ ವಿರುದ್ಧ ಎಫ್ಐಆರ್