ಕರ್ನಾಟಕ

karnataka

ETV Bharat / state

ಖಜಾನೆ ಖಾಲಿ: ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳದ ಬೆಳಗಾವಿ ಮಹಾನಗರ ಪಾಲಿಕೆ - ಬೆಳಗಾವಿ ಮಹಾನಗರ ಪಾಲಿಕೆ ಖಜಾನೆ ಖಾಲಿ

ಬೆಳಗಾವಿ ಮಹಾನಗರ ಪಾಲಿಕೆಗೆ ಸೇರಿದ ನೂರಾರು ಹಳೆಯ ಕಟ್ಟಡಗಳಿದ್ದು, ಲೀಸ್ ಅವಧಿಯೂ ಮುಗಿದು ದಶಕಗಳೇ ಉರುಳಿವೆ. ಹಳೆಯ ದರದಲ್ಲೇ ಬಾಡಿಗೆ ವಸೂಲಿ ಮಾಡಲಾಗುತ್ತಿದ್ದು, ಸದ್ಯದ ಮಾರುಕಟ್ಟೆಗೆ ತಕ್ಕಂತೆ ಬಾಡಿಗೆ ದರ ಪರಿಷ್ಕರಿಸಲು ಪಾಲಿಕೆ ಹಿಂದೇಟು ಹಾಕುತ್ತಿದೆ.

Commercial stores
ಬಿಕೋ ಎನ್ನುತ್ತಿವೆ ವಾಣಿಜ್ಯ ಮಳಿಗೆಗಳು!

By

Published : Nov 9, 2020, 6:27 PM IST

ಬೆಳಗಾವಿ:ನಗರ ವಾಸಿಗಳ ತೆರಿಗೆ ಹಣ ಹಾಗೂ ಸರ್ಕಾರದ ವಿಶೇಷ ಅನುದಾನಗಳಲ್ಲಿ ನಗರದ ವಿವಿಧೆಡೆ ನಿರ್ಮಿಸಲಾಗಿರುವ ನೂರಾರು ವಾಣಿಜ್ಯ ಮಳಿಗೆಗಳು ಸದ್ಬಳಕೆಯಾಗದೆ ಪರಿಣಾಮ ಭೂತ ಬಂಗಲೆಗಳಾಗಿ ಪರಿವರ್ತನೆಗೊಂಡಿವೆ. ಸಂಪನ್ಮೂಲಗಳ ಬಳಕೆಯಲ್ಲಿ ಹಿಂದೆ ಬಿದ್ದಿರುವ ಪಾಲಿಕೆ ಹಣವಿಲ್ಲದೇ ನರಳುತ್ತಲೇ ಇದೆ.

ಪ್ರತಿವರ್ಷ ಪಾಲಿಕೆಗೆ ₹60 ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತದೆ. ಅಲ್ಲದೆ, ಸರ್ಕಾರದ ನಗರೋತ್ಥಾನ ಯೋಜನೆಯಡಿಯೂ ₹100 ಕೋಟಿ ಬಿಡುಗಡೆಯಾಗುತ್ತದೆ. ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕಿದ್ದ ಪಾಲಿಕೆ ಸರ್ಕಾರದ ಅನುದಾನಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿರುವುದು ವಿಪರ್ಯಾಸವೇ ಸರಿ. ಆರ್ಥಿಕವಾಗಿ ಸಬಲವಾಗಲು ಬೇಕಾಗುವ ಎಲ್ಲ ಸಂಪನ್ಮೂಲಗಳಿದ್ದರೂ ಸದ್ಬಳಕೆಗೆ ಇಲ್ಲಿನ ಅಧಿಕಾರಿಗಳು ಹಾಗೂ ಸದಸ್ಯರು ವಿಫಲರಾಗಿದ್ದಾರೆ. ಈ ಕಾರಣಕ್ಕೆ ಗುತ್ತಿಗೆ ಪೌರ ಕಾರ್ಮಿಕರಿಗೆ ವೇತನ ನೀಡಲು ಪಾಲಿಕೆಗೆ ಒಮ್ಮೊಮ್ಮೆ ಸಾಧ್ಯವಾಗುತ್ತಿಲ್ಲ.

ಬಿಕೋ ಎನ್ನುತ್ತಿವೆ ವಾಣಿಜ್ಯ ಮಳಿಗೆಗಳು:2010ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಖರ್ಚಾಗದೇ ಉಳಿದ ಹಣದಲ್ಲಿ ಕಾಂಗ್ರೆಸ್ ರಸ್ತೆಯಲ್ಲಿ 50ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಲೀಸ್ ಇಲ್ಲವೇ, ಬಾಡಿಗೆ ಆಧಾರದ ವ್ಯಾಪಾರಸ್ಥರಿಗೆ ನೀಡಲು ಮಹಾನಗರ ಪಾಲಿಕೆ ಮೀನಾಮೇಷ ಎಣಿಸುತ್ತಿದೆ.

ಪ್ರತಿ ಮಳಿಗೆಯನ್ನೂ ತಿಂಗಳಿಗೆ 10 ಸಾವಿರದಂತೆ ಬಾಡಿಗೆಗೆ ನೀಡಿದರೆ ₹5 ಲಕ್ಷ ಪಾಲಿಕೆಗೆ ಸಂಗ್ರಹವಾಗುತ್ತದೆ. ಇದೇ ರೀತಿ ಪಾಲಿಕೆಯ ತೆರಿಗೆ ಹಣದಲ್ಲಿ ಮೀನಿನ ಮಾರುಕಟ್ಟೆ, ಕಸಾಯಿಗಳಲ್ಲಿ ಹಾಗೂ ಸರದಾರ ಮೈದಾನದಲ್ಲಿ ಐವತ್ತಕ್ಕೂ ಅಧಿಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಬಾಡಿಗೆಗೆ ನೀಡಿಲ್ಲ.

ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳದ ಬೆಳಗಾವಿ ಮಹಾನಗರ ಪಾಲಿಕೆ

ಇನ್ನು ಪಾಲಿಕೆಗೆ ಸೇರಿದ ನೂರಾರು ಹಳೆಯ ಕಟ್ಟಡಗಳಿದ್ದು, ಲೀಸ್ ಅವಧಿಯೂ ಮುಗಿದು ದಶಕಗಳೇ ಉರುಳಿವೆ. ಹಳೆಯ ದರದಲ್ಲೇ ಬಾಡಿಗೆ ವಸೂಲಿ ಮಾಡಲಾಗುತ್ತಿದ್ದು, ಸದ್ಯದ ಮಾರುಕಟ್ಟೆಗೆ ತಕ್ಕಂತೆ ಬಾಡಿಗೆ ದರ ಪರಿಷ್ಕರಿಸಲು ಪಾಲಿಕೆ ಹಿಂದೇಟು ಹಾಕುತ್ತಿದೆ. ಹಳೆಯ ಕಟ್ಟಡಗಳ ದರ ಪರಿಷ್ಕರಣೆ ಹಾಗೂ ಹೊಸ ಕಟ್ಟಡಗಳನ್ನು ಲೀಸ್ ಇಲ್ಲವೇ ಬಾಡಿಗೆಗೆ ನೀಡಿದರೆ ಪ್ರತಿ ತಿಂಗಳು ಪಾಲಿಕೆಗೆ ಕೋಟ್ಯಂತರ ರೂ, ಹರಿದು ಬರುತ್ತದೆ. ಆದರೆ, ಪಾಲಿಕೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ಹೀಗಾಗಿ, ಜನರ ತೆರಿಗೆ ಹಣದಿಂದ ನಿರ್ಮಾಣಗೊಂಡಿರುವ ಹಾಗೂ ಪಾಲಿಕೆಗೆ ಸಂಪನ್ಮೂಲವಾಗಿರುವ ವಾಣಿಜ್ಯ ಮಳಿಗೆಗಳಿಂದ ಲಾಭ ಸಿಗುತ್ತಿಲ್ಲ. ಪಾಲಿಕೆಯ ಸದಸ್ಯರ ಅವಧಿ ಮುಗಿದು ಒಂದು ವರ್ಷವಾಗಿದ್ದು, ಜಿಲ್ಲಾಧಿಕಾರಿಗಳು ಅದರ ಆಡಳಿತ ನಡೆಸುತ್ತಿದ್ದಾರೆ. ಈಗಲಾದರೂ ಸಂಪನ್ಮೂಲಗಳ ಬಳಕೆಯತ್ತ ಪಾಲಿಕೆ ಅಧಿಕಾರಿಗಳು ಮುಂದಾಗಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ.

ABOUT THE AUTHOR

...view details