ಬೆಳಗಾವಿ:ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಐವರು ಅಧಿಕಾರಿಗಳ ತಂಡ ಇಂದು ಪರಿಶೀಲಿಸಿತು. ಇದಕ್ಕೂ ಮುನ್ನ ನಗರದ ಪ್ರವಾಸಿಮಂದಿರದಲ್ಲಿ ಬೆಳಗ್ಗೆ ಅಜಿತ್ ಕುಮಾರ್ ಸಾಹು ತಂಡ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿತು. ನಂತರ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿತು.
ಮೊದಲಿಗೆ ಬೈಲಹೊಂಗಲ ತಾಲೂಕಿನ ನೇಸರಗಿ ಬಳಿಯ ನಾಗಪ್ಪ ಹಬಿ ಅವರ ಜಮೀನಿನಲ್ಲಿ ಸೋಯಾಬಿನ್ ಹಾಗೂ ರಾಜು ಹೊಂಗಲ್ ಮತ್ತು ಬಸಪ್ಪ ಕುಂಟಿಗೇರಿ ಅವರ ಜಮೀನಿನಲ್ಲಿ ಕ್ಯಾರೆಟ್ ಬೆಳೆಹಾನಿ ವೀಕ್ಷಿಸಿದರು. "ಎಕರೆಗೆ 52 ಸಾವಿರ ರೂ, ಎರಡು ಎಕರೆಗೆ ಒಂದು ಲಕ್ಷ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ. ಬೀಜ, ಗೊಬ್ಬರಕ್ಕಾಗಿ ಒಂದು ಎಕರೆಗೆ 25 ಸಾವಿರ ರೂ. ಖರ್ಚಾಗಿದೆ" ಎಂದು ಬಸಪ್ಪ ಕುಂಟಿಗೇರಿ ಅಳಲು ತೋಡಿಕೊಂಡರು. "ನೇಸರಗಿ ಭಾಗದಲ್ಲಿ 295 ಹೆಕ್ಟೇರ್ ಕ್ಯಾರೆಟ್ ಬಿತ್ತನೆ ಮಾಡಲಾಗಿದೆ. ಇಳುವರಿ ಸಂಪೂರ್ಣ ಹಾಳಾಗಿದೆ" ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರೈತರ ನೋವು:ಪ್ರತಿ ರೈತರು ಐದಾರು ಎಕರೆ ಕ್ಯಾರೆಟ್ ಬಿತ್ತನೆ ಮಾಡಿದ್ದು, ಬೆಳೆ ಹಾನಿಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ರೈತರು ತಮ್ಮ ಸಮಸ್ಯೆ ಹೇಳಿಕೊಂಡರು. ತಜ್ಞರ ತಂಡದ ಮುಖ್ಯಸ್ಥರು ಹಾಗೂ ಸದಸ್ಯರು ಸ್ವತಃ ರೈತರೊಂದಿಗೆ ಚರ್ಚಿಸಿ, ಬೆಳೆಹಾನಿ ಕುರಿತು ಮಾಹಿತಿ ಸಂಗ್ರಹಿಸಿದರು. ಇದಾದ ಬಳಿಕ ಮೀರಪ್ಪ ಹುಕ್ಕೇರಿ ಅವರ ಹನ್ನೆರಡು ಎಕರೆ ಸೋಯಾಬಿನ್ ಬೆಳೆಹಾನಿ ಪರಿಶೀಲಿಸಿದರು. "ಎಕರೆಗೆ ಹತ್ತನ್ನೆರಡು ಎಕರೆ ಇಳುವರಿ ಬರಬೇಕಿತ್ತು. ಮಳೆ ಕೊರತೆಯಿಂದ ಸಂಪೂರ್ಣ ಹಾನಿಯಾಗಿದೆ. ಸ್ವಲ್ಪ ಮಳೆ ಆಗಿರುವುದರಿಂದ ಹಸಿರು ಕಾಣಿಸುತ್ತಿದೆ. ಆದರೆ ಇಳುವರಿ ಇಲ್ಲ" ಎಂದು ರೈತ ಮಹಿಳೆ ಕಮಲವ್ವ ನಡಹಟ್ಟಿ ವಿವರಿಸಿದರು.
ಚಚಡಿಯಲ್ಲಿ ವೀರಭದ್ರಪ್ಪ ಹೊಸಮನಿಯವರ ಒಂದೂವರೆ ಎಕರೆ ಸೂರ್ಯಕಾಂತಿ ಬೆಳೆಹಾನಿ ವೀಕ್ಷಿಸಿದರು. ಈಗಾಗಲೇ 20 ಸಾವಿರ ರೂ ಖರ್ಚು ಮಾಡಲಾಗಿದೆ ಎಂದು ರೈತರು ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡರು. ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥರಾದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರು, ಬೆಳೆ ವಿಮೆ ಪಾವತಿ, ಬೀಜ, ಗೊಬ್ಬರ, ಕೃಷಿ ಕೂಲಿಕಾರರ ಖರ್ಚು-ವೆಚ್ಚಗಳ ಬಗ್ಗೆ ಸ್ವತಃ ರೈತರಿಂದ ಮಾಹಿತಿ ಪಡೆದರು.