ಬೆಳಗಾವಿ: ನೂರಾರು ಟನ್ ತ್ಯಾಜ್ಯ ಸಂಗ್ರಹಿಸಿ ಗೊಬ್ಬರ ತಯಾರಿಸಿ ಗಮನ ಸೆಳೆದಿದ್ದ ಬೆಳಗಾವಿ ಮಹಾನಗರ ಪಾಲಿಕೆ ಇದೀಗ ವಿದ್ಯುತ್ ತಯಾರಿಕೆಗೂ ಮುಂದಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶನದ ಹಿನ್ನೆಲೆಯಲ್ಲಿ ಪಾಲಿಕೆ ಬಯೋ ಮೀಥೇನ್ ಮೂಲಕ ತ್ಯಾಜ್ಯದಿಂದ ವಿದ್ಯುತ್ ತಯಾರಿಕೆಗೆ ಯೋಜನೆ ಹಾಕಿಕೊಂಡಿದೆ.
ಮಹಾನಗರದಲ್ಲಿ ನಿತ್ಯ 120 ಟನ್ ತ್ಯಾಜ್ಯ ಸಂಗ್ರವಾಗುತ್ತದೆ. ಈ ಕಸವನ್ನು ಬೆಳಗಾವಿ ತಾಲೂಕಿನ ತುರುಮುರಿ ಗ್ರಾಮದಲ್ಲಿರುವ ಗೊಬ್ಬರ ತಯಾರಿಕಾ ಘಟಕಕ್ಕೆ ಡಂಪ್ ಮಾಡಲಾಗುತ್ತದೆ. ತ್ಯಾಜ್ಯದ ಸಹಾಯದಿಂದ ಗೊಬ್ಬರ ತಯಾರಿಸಲಾಗುತ್ತದೆ. ಇದೀಗ ಇದೇ ಕಸದಿಂದ ವಿದ್ಯುತ್ ತಯಾರಿಸಲು ಪಾಲಿಕೆ ಮುಂದಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶನ ಹಿನ್ನೆಲೆಯಲ್ಲಿ ಕಸದಲ್ಲಿ ರಸ ಹುಡುಕುವ ಯತ್ನಕ್ಕೆ ಪಾಲಿಕೆ ಮುಂದಾಗಿದೆ. ವಿದ್ಯುತ್ ತಯಾರಿಕಾ ಘಟಕ ಅಳವಡಿಸಲು ಪಾಲಿಕೆ ಆಯುಕ್ತರು ಬೆಳಗಾವಿ ಎಪಿಎಂಸಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ವಿದ್ಯುತ್ ಘಟಕ ಅಳವಡಿಕೆಗೆ 10 ಗುಂಟೆ ಜಾಗ ನೀಡುವಂತೆ ಕೋರಿದ್ದರು. ಇದಕ್ಕೆ ಎಪಿಎಂಸಿ ಅಧಿಕಾರಿಗಳು ಕೂಡ ಗ್ರೀನ್ ಸಿಗ್ನಲ್ ನೀಡಿ ಪಾಲಿಕೆಗೆ 10 ಗುಂಟೆ ಜಾಗ ಮಂಜೂರು ಮಾಡಿದ್ದಾರೆ. ಹೀಗಾಗಿ ಹಸಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ 15ನೇ ಹಣಕಾಸು ಯೋಜನೆಯಡಿ 1.30 ಕೋಟಿ ರೂ. ಮೀಸಲಿಟ್ಟಿದೆ. ಟೆಂಡರ್ ಪ್ರಕ್ರಿಯೆಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೂನ್ ವೇಳೆಗೆ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಪಾಲಿಕೆ ಪರಿಸರ ಅಭಿಯಂತರ ಆದಿಲ್ ಖಾನ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಆದಿಲ್ ಖಾನ್ 400 ಕಿ.ವ್ಯಾಟ್ ವಿದ್ಯುತ್ ಉತ್ಪಾದನೆ: ಪಾಲಿಕೆ ಸಂಗ್ರಹಿಸುತ್ತಿರುವ ತ್ಯಾಜ್ಯದ ಪೈಕಿ ಆರಂಭದಲ್ಲಿ 5 ಟನ್ ಹಸಿ ಕಸವನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ನಿರ್ಧರಿಸಲಾಗಿದೆ. ಐದು ಟನ್ ಹಸಿ ಕಸದಿಂದ ನಿತ್ಯ 400-450 ಕಿಲೋ ವ್ಯಾಟ್ ವಿದ್ಯುತ್ ತಯಾರಿಸಬಹುದಾಗಿದೆ. ಈ ಯೋಜನೆ ಯಶಸ್ವಿಯಾದರೆ ನಗರದ ಇತರ ಕಡೆಯೂ ದೊಡ್ಡ ಮಟ್ಟದ ಘಟಕ ನಿರ್ಮಿಸಲು ಪಾಲಿಕೆ ನಿರ್ಧರಿಸಿದೆ.
ಆ ಮೂಲಕ ವಿದ್ಯುತ್‍ನಲ್ಲಿ ಪಾಲಿಕೆ ಸ್ವಾವಲಂಬಿಯಾಗುವತ್ತ ಹೆಜ್ಜೆ ಇರಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ತರಕಾರಿ ಬೆಳಗಾವಿಯಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ಎಪಿಎಂಸಿ ಮೂಲಕ ನೆರೆಯ ಗೋವಾ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣಕ್ಕೆ ತರಕಾರಿ ರವಾನೆಯಾಗುತ್ತದೆ. ಹೀಗಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ವಿದ್ಯುತ್ ತಯಾರಿಕೆಗೆ ಬಳಸಲು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ವಿದ್ಯುತ್ ತಯಾರಿಕಾ ಘಟಕವನ್ನು ಎಪಿಎಂಸಿ ಆವರಣದಲ್ಲಿ ಅಳವಡಿಸಲು ಪಾಲಿಕೆ ನಿರ್ಧರಿಸಿದೆ.