ಬೆಳಗಾವಿ, ಬಳ್ಳಾರಿ, ಕೊಪ್ಪಳ:ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬ ಆಚರಣೆಯನ್ನು ಮುಸ್ಲಿಂ ಬಾಂಧವರು ಇಂದು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಜಿಟಿಜಿಟಿ ಮಳೆಯ ನಡುವೆಯೂ ಬಕ್ರೀದ್ ಹಬ್ಬದ ಸಂಭ್ರಮ ಮನೆಮಾಡಿದೆ. ನಗರದ ಡಿಸಿ ಕಚೇರಿ ಸಮೀಪದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಂ ಬಾಂಧವರು ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸಿದರು. ಜೊತೆಗೆ ಜಿಲ್ಲೆಯಾದ್ಯಂತ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ಬಳಿಕ ಮುಫ್ತಿ ಅಬ್ದುಲ್ ಅಜೀಜ್ ಖಾಜಿ ಮಾತನಾಡಿ, ಬಕ್ರೀದ್ ಹಬ್ಬದ ಮಹತ್ವವನ್ನು ತಿಳಿಸಿದರು. ತಿಂಗಳಲ್ಲಿ ಲಕ್ಷಾಂತರ ಭಕ್ತರು ನಮ್ಮ ಇಸ್ಲಾಂ ಧರ್ಮದ ಪವಿತ್ರ ಕ್ಷೇತ್ರ ಮಕ್ಕಾಗೆ ಭೇಟಿ ನೀಡಿ ಹಜ್ ಯಾತ್ರೆಯನ್ನು ಪೂರ್ಣಗೊಳಿಸುತ್ತಾರೆ. ಬೆಳಗಾವಿಯಲ್ಲಿ ನಾವು ಬೇರೆ ಸಮುದಾಯದ ಜನರಿಗೆ ತೊಂದರೆಯಾಗದಂತೆ ಅತ್ಯಂತ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು. ಬಡ ಜನರಿಗೆ ಸಹಾಯ ಮಾಡಬೇಕು ಎಂದು ಕರೆ ನೀಡಿದರು.
ಈ ವೇಳೆ ಮುಸ್ಲಿಂ ಬಾಂಧವರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರಿದರು. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಶುಭ್ರ ಬಿಳಿ ಬಟ್ಟೆ ತೊಟ್ಟು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.