ಕರ್ನಾಟಕ

karnataka

ETV Bharat / state

ಹಳೆ ಮೈಸೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು: ಅಮಿತ್ ಶಾ ಚಾಣಾಕ್ಷ ನಡೆ

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್ ಪಕ್ಷಗಳ ಭದ್ರಕೋಟೆಯನ್ನು ಛಿದ್ರಗೊಳಿಸಲು ಬಿಜೆಪಿ ಸಜ್ಜಾಗಿದೆ. ಇದರ ಭಾಗವಾಗಿ ಮಂಡ್ಯದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ ಭಾಗವಹಿಸಲಿದ್ದಾರೆ.

amith-sha-addresses-bjp-rally-at-mandya
ಹಳೆ ಮೈಸೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು, ಸಹಕಾರಿಗಳ ಮತಬುಟ್ಟಿ ಭದ್ರ :ಅಮಿತ್ ಶಾ ಚಾಣಾಕ್ಷ ನಡೆ...!

By

Published : Dec 28, 2022, 8:33 PM IST

ಬೆಂಗಳೂರು: ಮಿಷನ್ 150 ಗುರಿಯೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿರುವ ರಾಜ್ಯ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ದೊಡ್ಡ ಮಟ್ಟದ ಶಕ್ತಿ ಪ್ರದರ್ಶನಕ್ಕೆ ತೀರ್ಮಾನಿಸಿದೆ. ಶುಕ್ರವಾರ ಮಂಡ್ಯದಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುತ್ತಿದ್ದು, ಬಿಜೆಪಿ ಚಾಣಕ್ಯ ಅಮಿತ್ ಶಾ ಮೈಸೂರು ಪ್ರಾಂತ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಸಂಘಟನಾತ್ಮಕವಾಗಿ ಪಕ್ಷ ನೆಲೆಯೂರುವಂತೆ ರಣರಂತ್ರ ಹೆಣೆಯಲಿದ್ದಾರೆ. ಇದರ ಜೊತೆಗೆ ಸಹಕಾರಿ ಕ್ಷೇತ್ರದ ಮತಬುಟ್ಟಿಯನ್ನು ಭದ್ರಪಡಿಸಿಕೊಳ್ಳುವಂತೆ ಬೆಂಗಳೂರಿನಲ್ಲಿ ಯಶಸ್ವಿನಿ ಯೋಜನೆಗೆ ಅವರು ಚಾಲನೆ ನೀಡುವರು.

ಮಂಡ್ಯದಲ್ಲಿ ಬೃಹತ್​ ಸಮಾವೇಶ:ಭರ್ಜರಿ ಸಮಾವೇಶಗಳ ಮೂಲಕ 2022ನೇ ವರ್ಷಕ್ಕೆ ಬಿಜೆಪಿ ತೆರೆ ಎಳೆಯಲು ಸಿದ್ದತೆ ಮಾಡಿಕೊಂಡಿದೆ. 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಬಿಜೆಪಿ ಸಮಾವೇಶಗಳನ್ನು ಆಯೋಜಿಸುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಅಷ್ಟಾಗಿ ನೆಲೆ ಇಲ್ಲ. ಕರಾವಳಿ, ಮಲೆನಾಡು, ಅರೆಮಲೆನಾಡು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಬೆಂಗಳೂರು ಭಾಗದಲ್ಲಿ ಬಿಜೆಪಿ ಸದೃಢವಾಗಿದ್ದರೂ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ಬಾರದೇ ಪೂರ್ಣ ಬಹುಮತಗಳಿಸಿಕೊಳ್ಳುವುದು ಬಿಜೆಪಿಗೆ ಕಷ್ಟ ಸಾಧ್ಯ. 2008 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಸರಳ ಬಹುಮತಕ್ಕೆ ಆಪರೇಷನ್ ನಡೆಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈಕಮಾಂಡ್ ಈ ಬಾರಿ ಹಳೆ ಮೈಸೂರು ಭಾಗಕ್ಕೆ ವಿಶೇಷ ಆದ್ಯತೆ ನೀಡಿದ್ದು, ರಾಜ್ಯದ ನಾಯಕರಿಗೂ ಕೆಲ ಟಾರ್ಗೆಟ್ ನೀಡಿದೆ. ಅದರ ಭಾಗವಾಗಿಯೇ ಡಿಸೆಂಬರ್ 30 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಿದೆ.

ಕಾಂಗ್ರೆಸ್​​, ಜೆಡಿಎಸ್​ ಭದ್ರಕೋಟೆ ವಶಪಡಿಕೊಳ್ಳಲು ಯೋಜನೆ​: ಮೈಸೂರು, ಚಾಮರಾಜನಗರ ಮತ್ತು ಹಾಸನಗಳ ಜಿಲ್ಲೆಗಳ ಜನರು ಮಂಡ್ಯದ ಸಮಾವೇಶದಲ್ಲಿ ಭಾಗವಹಿಸಲಿದ್ದು, 1 ಲಕ್ಷ ಜನರನ್ನು ಸೇರಿಸಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶಿಸಿ ಆ ಭಾಗದಲ್ಲಿ ಕೇಸರಿ ಕಾರ್ಯಕರ್ತರಲ್ಲಿ ಹುರುಪು ತುಂಬಲಿದೆ. ಹಳೆ ಮೈಸೂರು ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿದೆ. ಪ್ರತಿಪಕ್ಷಗಳ ಭದ್ರಕೋಟೆಯನ್ನು ಛಿದ್ರ ಮಾಡುವ ತಂತ್ರಗಾರಿಕೆಗಾಗಿಯೇ ಅಮಿತ್ ಶಾ ಆಗಮಿಸುತ್ತಿದ್ದು, ಜನರನ್ನು ಸೆಳೆಯುವ ರೀತಿ ಭಾಷಣ ಮಾಡಲಿದ್ದಾರೆ. ಅಷ್ಟು ಮಾತ್ರವಲ್ಲದೆ ರಾಜ್ಯದ ಇತರ ಭಾಗದಲ್ಲಿರುವಂತೆ ಬೇರು ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಲು ಬೇಕಾದ ಕಾರ್ಯತಂತ್ರ ರೂಪಿಸಲಿದ್ದಾರೆ.

ಬಿಜೆಪಿ ಬಲವರ್ಧನೆಗೆ ಚಿಂತನೆ: ಈಗಾಗಲೇ ಮಾಜಿ ಸಂಸದ ಮುದ್ದಹನುಮೇಗೌಡರನ್ನು ಬಿಜೆಪಿಗೆ ಕರೆತರಲಾಗಿದ್ದು, ಮತ್ತಷ್ಟು ಸ್ಥಳೀಯ ನಾಯಕರನ್ನು ಬಿಜೆಪಿ ತೆಕ್ಕೆಗೆ ಸೇರಿಸಿಕೊಂಡು ಈ ಭಾಗದಲ್ಲಿ ಬಿಜೆಪಿ ಬಲವರ್ಧನೆಗೆ ಚಿಂತನೆ ನಡೆಸಲಾಗಿದೆ. ಅಮಿತ್ ಶಾ ಭೇಟಿ ವೇಳೆ ಯಾರೆಲ್ಲಾ ನಾಯಕರು ಬಿಜೆಪಿ ಸೇರಲಿದ್ದಾರೆ ಎನ್ನುವುದು ಅಂತಿಮವಾಗಲಿದೆ. ಇತರ ಪಕ್ಷಗಳ ನಾಯಕರನ್ನು ಸೆಳೆಯುವ ಮೂಲಕ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯಿಂದ ಹೆಚ್ಚಿನ ಶಾಸಕರು ಆಯ್ಕೆಯಾಗಬೇಕು ಎನ್ನುವುದು ಬಿಜೆಪಿಯ ಯೋಜನೆಯ ಒಂದು ಭಾಗ. ಪ್ರಧಾನಿ ಮೋದಿ ಮೈಸೂರಿನಲ್ಲಿ ಯೋಗ ದಿನಾಚರಣೆ ನಡೆಸಿ ಆ ಭಾಗದಲ್ಲಿ ಜನತೆಯ ಗಮನ ಸೆಳೆದಿದ್ದರೆ, ಅಮಿತ್ ಶಾ ಮಂಡ್ಯದಲ್ಲಿ ಭರ್ಜರಿ ಭಾಷಣ ಮಾಡಿ ಸಾಂಸ್ಕೃತಿಕ ಕುರುಹಾಗಿರುವ ಹಳೆ ಮೈಸೂರಿನಲ್ಲಿ ಕೇಸರಿ ಕಮಾಲ್ ಮಾಡಲು ಮುಂದಾಗಿದ್ದಾರೆ.

ಸಹಕಾರಿ ಕ್ಷೇತ್ರದ ಮತದಾರರನ್ನು ಸೆಳೆಯಲು ರಣತಂತ್ರ: ಇದರ ಜೊತೆಗೆ ರಾಜ್ಯದ ಸಹಕಾರಿ ಕ್ಷೇತ್ರದ ಮತಬುಟ್ಟಿಯನ್ನು ಭದ್ರಪಡಿಸಿಕೊಳ್ಳುವ ಭರ್ಜರಿ ಘೋಷಣೆಗೆ ಡಿಸೆಂಬರ್ ಕೊನೆ ಸಾಕ್ಷಿಯಾಗಲಿದೆ. 30ರಂದು ಬೆಳಿಗ್ಗೆ 11 ಗಂಟೆಗೆ ಮದ್ದೂರಿನ ಮೆಗಾ ಡೇರಿಯನ್ನು ಅಮಿತ್ ಶಾ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಹಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ 31 ರಂದು ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆಯಲ್ಲಿ ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ಸಾಲ ನೀಡುವ ಕಾರ್ಯಕ್ರಮ ನಡೆಯಲಿದೆ. ಯಶಸ್ವಿನಿ ಯೋಜನೆಗೆ 20 ಲಕ್ಷ ಜನರು ನೋಂದಾವಣೆ ಆಗಿದ್ದಾರೆ. ಯೋಜನೆಗೆ ಜನವರಿ ಒಂದರಿಂದ ಮರು ಚಾಲನೆ ನೀಡುವ ಕಾರ್ಯವನ್ನು ಅಮಿತ್ ಶಾ ಅವರು ಉದ್ಘಾಟಿಸುತ್ತಾರೆ. ಇದು ಬಹಳ ಮುಖ್ಯವಾದ ಯೋಜನೆಯಾಗಿದ್ದು, ಚುನಾವಣೆ ವೇಳೆ ಬಿಜೆಪಿ ಪರ ಸಹಕಾರಿಗಳ ಒಲವು ಮೂಡಿಸುವಲ್ಲಿ ಸಫಲವಾಗಲಿದೆ.

ಅಲ್ಲದೆ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ನೀಡುವ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಸಕ್ಕರೆ ಕ್ಷೇತ್ರ ಬಲಿಷ್ಠಗೊಳಿಸಲು ಅಮಿತ್ ಶಾ ಅವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸುಮಾರು 5,700 ವಿಎಸ್‍ಎಸ್‍ಗಳಿಗೆ, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲಭಿಸಿದ ಪ್ರಯೋಜನವನ್ನು ಪರಿಶೀಲಿಸುವರು. 31ರಂದು ಮಲ್ಲೇಶ್ವರದ ಸೌಹಾರ್ದ ಫೇಡರೇಶನ್‍ಗೆ ಭೇಟಿ ಕೊಡುತ್ತಾರೆ. ಸೌಹಾರ್ದ ಸಹಕಾರಿಗಳ ಸಭೆ ನಡೆಸಲಿದ್ದಾರೆ.

ಬಿಜೆಪಿ ಘಟಾನುಘಟಿ ನಾಯಕರಿಂದ ಪ್ರಚಾರ: 2023ರ ಹೊಸ ವರ್ಷ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಅಮಿತ್ ಶಾ ಸಂಚಲನ ಮೂಡಿಸಲಿದ್ದಾರೆ. ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ. ಜನವರಿಯಿಂದ ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಘಟಾನುಘಟಿಗಳ ದಂಡೇ ರಾಜ್ಯದತ್ತಾ ಆಗಮಿಸಲಿದ್ದು, ಹಿಂದೆಂದಿಗಿಂತಲೂ ಬೃಹತ್ ಪ್ರಮಾಣದಲ್ಲಿ ಹೈಕಮಾಂಡ್ ನೇತೃತ್ವದಲ್ಲಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಯಲಿದೆ. ಶತಾಯಗತಾಯ ಹಳೆ ಮೈಸೂರು ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಅಮಿತ್ ಶಾ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ಬಿಸಿ ತಟ್ಟಲಿದೆಯಾ..?

ABOUT THE AUTHOR

...view details