ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿರುವ ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಬೆಳಗಾವಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ತಹಸೀಲ್ದಾರರು ಸಕ್ಕರೆ ಲಾಬಿಗೆ ಮಣಿದರೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಕಬ್ಬು ಪಾವತಿ ಬಾಕಿ: ರೈತರ ಹಿತಾಸಕ್ತಿ ಮರೆತ ಬೆಳಗಾವಿ ಅಧಿಕಾರಿಗಳು? - ಸಕ್ಕರೆ ಕಾರ್ಖಾನೆ
ಸಿಎಂ ಎಚ್ಡಿ ಕುಮಾರಸ್ವಾಮಿ ನಿರ್ದೇಶನದ ಮೇರೆಗೆ 9 ಕಬ್ಬು ಕಾರ್ಖಾನೆ ಮುಟ್ಟುಗೋಲಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ ತಹಸೀಲ್ದಾರರು ಸಿಎಂ ನಿರ್ದೇಶನ, ಡಿಸಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
2018-19ರ ಸಾಲಿನಲ್ಲಿ ರೈತರಿಂದ ಕಬ್ಬು ಪಡೆದ 9 ಸಕ್ಕರೆ ಕಾರ್ಖಾನೆಗಳು ಇನ್ನೂ ಬಿಲ್ ಪಾವತಿಸಿಲ್ಲ. ಸರ್ಕಾರದ ಸೂಚನೆ ಇದ್ದರೂ ಎಫ್ಆರ್ಪಿ ದರ ನಿಗದಿ ಮಾಡದೇ ಹಾಗೂ ನಿಗದಿತ ಸಮಯದಲ್ಲಿ ಬಿಲ್ ಪಾವತಿಸದೇ 9 ಸಕ್ಕರೆ ಕಾರ್ಖಾನೆಗಳು ನಿಯಮ ಉಲ್ಲಂಘಿಸಿದ್ದವು. ಈ ಎಲ್ಲ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಸ್. ಬಿ. ಬೊಮ್ಮನಹಳ್ಳಿ ಎಲ್ಲಾ ತಹಸೀಲ್ದಾರರಿಗೆ ಜೂನ್ 15 ರಂದು ಆದೇಶ ಹೊರಡಿಸಿದ್ದರು.
ಮುಟ್ಟುಗೋಲು ಆದೇಶ ಹೊರಡಿಸಿ 10 ದಿನ ಕಳೆದರೂ ಈವರೆಗೂ ಸಕ್ಕರೆ ಕಾರ್ಖಾನೆಗಳು ಸೀಜ್ ಆಗದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಶಾಸಕ ಉಮೇಶ್ ಕತ್ತಿ ಒಡೆತನದ ವಿಶ್ವರಾಜ್ ಸಕ್ಕರೆ ಕಾರ್ಖಾನೆ 3.3 ಕೋಟಿ ರೂ, ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಒಡೆತನದ ಅಥಣಿ ಶುಗರ್ಸ್ 6.46 ಕೋಟಿ ರೂ, ಖಾನಾಪುರದ ಪ್ರಭಾವಿ ಬಿಜೆಪಿ ಮುಖಂಡ ವಿಠ್ಠಲ್ ಹಲಗೇಕರ್ ಮಾಲೀಕತ್ವದ ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ 3.24 ಕೋಟಿ ರೂ, ಮಹಿಳಾ ಉದ್ಯಮಿ ವಿದ್ಯಾ ಮರಕುಂಬಿ ಮಾಲೀಕತ್ವದ ಮುನವಳ್ಳಿಯ ರೇಣುಕಾ ಶುಗರ್ಸ್ 4.50 ಕೋಟಿ ರೂ. ಸೇರಿ 9 ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ.