ಕರ್ನಾಟಕ

karnataka

By

Published : May 7, 2021, 8:30 AM IST

ETV Bharat / state

ಕೊರೊನಾ ಕಾಲದಲ್ಲಿ ದಾನಿಗಳ ನೆರವಿಲ್ಲದೆ ಸಂಕಷ್ಟದಲ್ಲಿದೆ ಬೆಳಗಾವಿಯ ವೃದ್ಧಾಶ್ರಮ

ಮಹಾಮಾರಿ ಕೋವಿಡ್​​ ಯಾರನ್ನೂ, ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಮಾನವೀಯತೆಯಿಂದ ದಾನಕ್ಕೆ ಮುಂದಾಗುತ್ತಿದ್ದ ದಾನಿಗಳೇ ಈಗ ತೊಂದರೆಯಲ್ಲಿದ್ದಾರೆ. ಪರಿಣಾಮ ಬೆಳಗಾವಿ ಹೊರವಲಯದಲ್ಲಿರುವ ಶಾಂತಾಯಿ ವೃದ್ಧಾಶ್ರಮದಲ್ಲಿರುವ ವೃದ್ಧರ ಬದುಕು ಕೂಡ ಅಯೋಮಯವಾಗಿದೆ.

2nd wave covid effect on belgavi Old age home
ದಾನಿಗಳನ್ನೇ ಸಂಕಷ್ಟಕ್ಕೆ ದೂಡಿದ ಕೊರೊನಾ - ಸಂಕಷ್ಟದಲ್ಲಿದೆ ಬೆಳಗಾವಿ ವೃದ್ಧಾಶ್ರಮ!

ಬೆಳಗಾವಿ: ದೇಶಾದ್ಯಂತ ಕೋವಿಡ್​​ ಅಟ್ಟಹಾಸ ಮುಂದುವರೆದಿದೆ. ಮಾರಕ ರೋಗದ ತಾಂಡವಕ್ಕೆ ಎಲ್ಲ ವರ್ಗದ ಜನರೂ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ದಾನಿಗಳ ಮೂಲಕ ನಡೆಯುತ್ತಿದ್ದ ಬೆಳಗಾವಿ ಹೊರವಲಯದಲ್ಲಿರುವ ಶಾಂತಾಯಿ ವೃದ್ಧಾಶ್ರಮದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಸರ್ಕಾರದ ಸಹಾಯವಿಲ್ಲದೇ ಕಳೆದೆರಡು ದಶಕಗಳಿಂದ ನಡೆಯುತ್ತಿರುವ ಈ ವೃದ್ಧಾಶ್ರಮವನ್ನು ಕೋವಿಡ್ ಸಂದಿಗ್ಧ ಸಮಯದಲ್ಲಿ ಮುನ್ನಡೆಸುವುದು ಆಡಳಿತ ಮಂಡಳಿಗೆ ಸವಾಲಾಗಿದೆ.

ಶಾಂತಾಯಿ ವೃದ್ಧಾಶ್ರಮದ ಪರಿಸ್ಥಿತಿ

ಮಾಜಿ ಮೇಯರ್ ವಿಜಯ್ ಮೋರೆ ಮುಂದಾಳತ್ವದಲ್ಲಿ ಈ ವೃದ್ಧಾಶ್ರಮ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆರ್ಥಿಕ ನೆರವಿಲ್ಲದೇ ಕೇವಲ ದಾನಿಗಳ ಸಹಾಯ ಪಡೆದು ಆಶ್ರಮವನ್ನು ನಡೆಸಲಾಗುತ್ತಿದೆ. 70, 80 ಹಾಗೂ 90 ವರ್ಷಕ್ಕಿಂತ ಮೇಲ್ಪಟ್ಟ 44 ಅನಾಥ ವೃದ್ಧರ ಪಾಲನೆ, ಪೋಷಣೆ ಇಲ್ಲಿ ನಡೆಯುತ್ತಿದೆ.

ಊಟೋಪಚಾರ, ಆರೋಗ್ಯ ತಪಾಸಣೆ ಸೇರಿ ವೃದ್ಧರಿಗೆ ತಿಂಗಳಿಗೆ ಕನಿಷ್ಠ 2 ಲಕ್ಷ ರೂ. ಖಾರ್ಚಾಗುತ್ತಿದೆ. ದಾನಿಗಳ ಹೊರತಾಗಿ, ರಾಜಕೀಯ ನಾಯಕರು, ಉದ್ಯಮಿಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಅಲ್ಪಪ್ರಮಾಣದ ನೆರವಿನಿಂದ ವೃದ್ಧಾಶ್ರಮವನ್ನು ಈವರೆಗೆ ಮುನ್ನಡೆಸಲಾಗುತ್ತಿತ್ತು. ಕೊರೊನಾಗಿಂತ ಮೊದಲು ಪ್ರತಿ ತಿಂಗಳು ಕನಿಷ್ಠ 3 ಲಕ್ಷ ರೂ. ನೆರವು ಹರಿದು ಬರುತ್ತಿತ್ತಂತೆ. ಕಳೆದ ಒಂದೂವರೆ ವರ್ಷಗಳಿಂದ ಇದರ ಪ್ರಮಾಣ ಕುಸಿದಿದೆ.

ನಗರದ ಹೊರವಲಯದ ಐದು ಎಕರೆ ಜಾಗದಲ್ಲಿರುವ ವೃದ್ಧಾಶ್ರಮ ಕಳೆದ ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಜನ್ಮದಿನ, ಮದುವೆ ವಾರ್ಷಿಕೋತ್ಸವ, ಮಕ್ಕಳ ಜನ್ಮ ದಿನದ ಪ್ರಯುಕ್ತ ಅದೆಷ್ಟೋ ಜನರು ಇಲ್ಲಿಗೆ ಭೇಟಿ ನೀಡಿ ಆಹಾರ ಧಾನ್ಯ ಹಾಗೂ ಹಣ ನೀಡುತ್ತಿದ್ದರು. ಆ ಮೂಲಕ ಜನ್ಮದಿನದ ಸಂಭ್ರಮವನ್ನು ಸಾರ್ಥಕಗೊಳಿಸುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಯೇ ಸವಾಲಾಗಿರೋದ್ರಿಂದ ಜನ್ಮದಿನ, ಮದುವೆ ವಾರ್ಷಿಕೋತ್ಸವ ಮಾಡಿಕೊಳ್ಳುವ ಉತ್ಸಾಹವನ್ನು ಜನರು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:ಕೊರೊನಾ ಬಯೋ ಮೆಡಿಕಲ್ ವೇಸ್ಟ್ ವಿಲೇವಾರಿಗಿವೆ ಹೆಚ್ಚುವರಿ ಕ್ರಮ

ಎರಡು ದಶಕಗಳಿಂದ ರಾಜ್ಯ ಸರ್ಕಾರದ ನೆರವಿಲ್ಲದೇ ಆಶ್ರಮ ನಡೆಸುವ ಮೂಲಕ ಇಲ್ಲಿನ ಆಡಳಿತ ಮಂಡಳಿ ಮೆಚ್ಚುಗೆಯ ಕೆಲಸ ಮಾಡಿದೆ. ಇದೀಗ ದಾನಿಗಳ ಕೊರತೆಯಿಂದ ಆಶ್ರಮ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆಡಳಿತ ಮಂಡಳಿ ಹೇಳುತ್ತಿದೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಇಲ್ಲವೇ ಕೇಂದ್ರ ಸರ್ಕಾರ ಕನಿಷ್ಠ ಊಟ, ವೈದ್ಯಕೀಯ ಉಪಚಾರಕ್ಕಾದರೂ ಈ ಆಶ್ರಮಕ್ಕೆ ನೆರವು ನೀಡಲು ಮುಂದೆ ಬರಬೇಕಿದೆ. ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಕ್ರೀಡಾಪಟುಗಳು, ಸಿನಿಮಾ ತಾರೆಗಳು ಸಂಕಷ್ಟದ ಸಮಯದಲ್ಲಿ ಆಶ್ರಮದ ನೆರವಿಗೆ ಧಾವಿಸಬಹುದು. ಈ ಮೂಲಕ ಜೀವನದ ಸಂಧ್ಯಾಕಾಲದಲ್ಲಿ ಅನಾಥವಾಗಿರುವ ಹಿರಿ ಜೀವಗಳಿಗೆ ನೆರವಾಗಬಹುದು.

ABOUT THE AUTHOR

...view details