ಕರ್ನಾಟಕ

karnataka

ETV Bharat / state

ರಾಜ್ಯದ ರಾಜಕಾರಣಿಗಳಲ್ಲೇ ಅತ್ಯಂತ ಶ್ರೀಮಂತ ಯೂಸುಫ್ ಷರೀಫ್(ಕೆಜಿಎಫ್ ಬಾಬು)..

ವಿಧಾನ ಪರಿಷತ್​ಗೆ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಅವರ ಒಟ್ಟು ಆಸ್ತಿ ಮೌಲ್ಯ 1,745 ಕೋಟಿ ರೂ.ಗಿಂತಲೂ ಅಧಿಕವಿದೆ. ರಾಜ್ಯದ ಶ್ರೀಮಂತ ರಾಜಕಾರಣಿಗಳ ಪಟ್ಟಿಗೆ ಇವರ ಹೆಸರೂ ಸೇರ್ಪಡೆಯಾಗಿದೆ..

Yusuf Sharif is the richest politician in Karnataka
ಯೂಸುಫ್ ಷರೀಫ್

By

Published : Nov 24, 2021, 3:17 PM IST

ಬೆಂಗಳೂರು :ರಾಜ್ಯದ ಶ್ರೀಮಂತ ರಾಜಕಾರಣಿಗಳ ಪಟ್ಟಿಗೆ ಹೊಸ ಸೇರ್ಪಡೆ ಯೂಸುಫ್ ಷರೀಫ್​ (ಕೆಜಿಎಫ್ ಬಾಬು). ಹಾಲಿ ವಿಧಾನ ಪರಿಷತ್​ಗೆ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಬು ಆಸ್ತಿ ಮೌಲ್ಯ ಬರೋಬ್ಬರಿ 1,745 ಕೋಟಿ ರೂ. ಗಿಂತಲೂ ಅಧಿಕ.

ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ತಮ್ಮ ಉಮೇದುವಾರಿಕೆಯ ನಾಮಪತ್ರ ಸಲ್ಲಿಕೆ ಮಾಡಿರುವ ಯೂಸುಫ್ ಶರೀಫ್ ಕೋಲಾರದ ಕೆಜಿಎಫ್ ಮೂಲದವರು. 97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1,643.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1,741.57 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಪತ್ನಿಯರು, ಅವಲಂಬಿತರು ಸೇರಿ ಅವರ ಒಟ್ಟು ಆಸ್ತಿ ಬರೋಬ್ಬರಿ 1,745 ಕೋಟಿ ರೂಪಾಯಿ.

ಈವರೆಗೂ ರಾಜ್ಯ ರಾಜಕಾರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವ ಎಂಟಿಬಿ ನಾಗರಾಜ್ ಅತ್ಯಂತ ಶ್ರೀಮಂತ ರಾಜಕಾರಣಿಗಳ ಪಟ್ಟಿಗೆ ಸೇರಿದ್ದರು. ಇದೀಗ ಕೆಜಿಎಫ್ ಬಾಬು ಇವರನ್ನೆಲ್ಲಾ ಮೀರಿಸುವ ಶ್ರೀಮಂತ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಜಕೀಯ ನಾಯಕರು

ವರ್ಷವಾರು ತಮ್ಮ ಆಸ್ತಿ ವಿವರ ತಿಳಿಸಿರುವ ಯೂಸುಫ್ ಷರೀಫ್ ಕೈಯಲ್ಲಿ 19.53 ಲಕ್ಷ ರೂ. ನಗದು ಇದೆ ಎಂದು ತಿಳಿಸಿದ್ದಾರೆ. ಅವರಿಗೆ ಇಬ್ಬರು ಪತ್ನಿಯರು ಹಾಗೂ ಐವರು ಮಕ್ಕಳಿದ್ದಾರೆ.

ರುಕ್ಸಾನಾ ತಾಜ್ ಅಬ್ದುಲ್ ಷರೀಫ್ ಮೊದಲ ಪತ್ನಿ. ಇವರ ಬಳಿ 1.57 ಲಕ್ಷ ರೂ., ಶಾಜಿಯಾ ತರನ್ನುಮ್ ಎರಡನೇ ಪತ್ನಿಯಾಗಿದ್ದಾರೆ. ಇವರ ಬಳಿ 89 ಸಾವಿರ ರೂ. ನಗದು, ಪುತ್ರಿ ಕೈಯಲ್ಲಿ 25 ಸಾವಿರ ರೂ., ಪುತ್ರನ ಕೈಯಲ್ಲಿ 5 ಸಾವಿರ ರೂ. ನಗದು ಇದೆ ಎಂದು ತಿಳಿಸಿದ್ದಾರೆ.

ಯೂಸುಫ್ ಷರೀಫ್ ಹೆಸರಿನಲ್ಲಿ ಬ್ಯಾಂಕ್​​ಗಳಲ್ಲಿ 16.87 ಕೋಟಿ ರೂ. ಠೇವಣಿ ಇದ್ದರೆ, ಮೊದಲ ಪತ್ನಿ ಹೆಸರಿನಲ್ಲಿ 16.99 ಲಕ್ಷ ರೂ., ಎರಡನೇ ಪತ್ನಿ ಹೆಸರಿನಲ್ಲಿ 20 ಸಾವಿರ ರೂ., ಪುತ್ರಿ ಹೆಸರಿನಲ್ಲಿ 7.38 ಲಕ್ಷ ರೂ., ಪುತ್ರನ ಹೆಸರಿನಲ್ಲಿ 11.52 ಲಕ್ಷ ರೂ. ಠೇವಣಿ ಇದೆ. ಬಾಂಡ್, ಷೇರುಗಳು, ಮ್ಯೂಚುವಲ್ ಫಂಡ್​​ಗಳಲ್ಲಿ ಷರೀಫ್ 17.62 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಮೊದಲ ಪತ್ನಿ 1.60 ಲಕ್ಷ ರೂ., ಎರಡನೇ ಪತ್ನಿ ₹75 ಸಾವಿರ ಹೂಡಿಕೆ ಮಾಡಿದ್ದಾರೆ. ಐದು ಕನ್ಸ್ಟ್ರಕ್ಷನ್ ಕಂಪನಿಗಳಲ್ಲಿ (ಕೆಜಿಎಫ್ ಬಾಬು) ಒಟ್ಟು 17.61 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಸಾಲ ನೀಡಿದ್ದಾರೆ :ಕೋಟ್ಯಧಿಪತಿ ಯೂಸುಫ್ ಷರೀಫ್ 58.12 ಕೋಟಿ ರೂಪಾಯಿನಷ್ಟು ಹಣವನ್ನ ಇತರರಿಗೆ ಸಾಲವಾಗಿ ನೀಡಿದ್ದಾರೆ. ಆಸ್ತಿ ಖರೀದಿಗೆ ಮುಂಗಡವಾಗಿ ಯೂಸುಫ್ ಷರೀಫ್ 11.44 ಕೋಟಿ ರೂ. ನೀಡಿದ್ದರೆ, ವಾಹನ ಖರೀದಿಗೆ 1.72 ಕೋಟಿ ರೂ. ಹಾಗೂ ಇತರರಿಗೆ ಸಾಲವಾಗಿ 44.94 ಕೋಟಿ ರೂ. ನೀಡಿದ್ದಾರೆ.

ಬೆಲೆಬಾಳುವ ಕಾರನ್ನು ಸಹ ಇವರು ಹೊಂದಿದ್ದಾರೆ. 2.99 ಕೋಟಿ ರೂ. ಮೌಲ್ಯದ ವಾಹನವನ್ನು ಹೊಂದಿದ್ದಾರೆ. 2.01 ಕೋಟಿ ರೂ. ಬೆಲೆಯ ಒಂದು ರೋಲ್ಸ್ ರಾಯ್ಸ್ ಕಾರು ಇದೆ. ಇದನ್ನು ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬಳಿಯಿಂದ ಖರೀದಿಸಿದ್ದಾರೆ.

ಎರಡು ಫಾರ್ಚ್ಯೂನರ್ ಕಾರುಗಳು ಅವರ ಬಳಿ ಇವೆ. ಅವರ ಮೊದಲ ಪತ್ನಿ ಬಳಿ 1.65 ಲಕ್ಷ ರೂ. ಮೌಲ್ಯದ ವಾಹನವಿದೆ. ಎರಡು ದ್ವಿಚಕ್ರ ವಾಹನಗಳು ಅವರ ಬಳಿ ಇವೆ. ಷರೀಫ್ ಬಳಿ 2.19 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣ, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ವಸ್ತುಗಳಿವೆ. ಮೊದಲ ಪತ್ನಿ ಬಳಿ 77.15 ಲಕ್ಷ ರೂ., ಎರಡನೇ ಪತ್ನಿ ಬಳಿ 30.37 ಲಕ್ಷ ರೂ., ಪುತ್ರಿ ಬಳಿ 58.73 ಲಕ್ಷ ರೂ. ಮೌಲ್ಯದ ಆಭರಣಗಳಿವೆ.

ಚರಾಸ್ತಿ :ಯೂಸುಫ್ ಬಳಿ 100 ಕೋಟಿ ರೂ.ಗೂ ಹೆಚ್ಚು ಮೊತ್ತದ ಚರಾಸ್ತಿ ಇದೆ. ಒಟ್ಟಾರೆ 97.98 ಕೋಟಿ ರೂ. ಮೌಲ್ಯದ ಚರಾಸ್ತಿ, ಮೊದಲ ಹೆಂಡತಿ ಬಳಿ 98.96 ಲಕ್ಷ ರೂ., 2ನೇ ಹೆಂಡತಿ ಬಳಿ 32.22 ಲಕ್ಷ ರೂ., ಪುತ್ರಿ ಬಳಿ 66.36 ಲಕ್ಷ ರೂ. ಹಾಗೂ ಪುತ್ರನ ಬಳಿ 11.57 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.

ಸ್ಥಿರಾಸ್ತಿ :ಯೂಸುಫ್ ಷರೀಫ್ ಅವರು 47.31 ಕೋಟಿ ರೂ. ಮೌಲ್ಯದ ಎರಡು ಕೃಷಿ ಭೂಮಿ, ಮೊದಲ ಪತ್ನಿ ಹೆಸರಿನಲ್ಲಿ 1.30 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. 1,593.27 ಕೋಟಿ ರೂ. ಮೊತ್ತದ ಕೃಷಿಯೇತರ ಜಮೀನು ಇವರ ಬಳಿ ಇದೆ. ಒಟ್ಟು 26 ನಿವೇಶನಗಳನ್ನು ಅವರು ಹೊಂದಿದ್ದಾರೆ. 3.01 ಕೋಟಿ ರೂ. ಮೌಲ್ಯದ ಮನೆ ನಿವೇಶನ ಸಹ ಇವರ ಆಸ್ತಿ ವಿವರದಲ್ಲಿ ಸೇರಿದೆ.

ಒಟ್ಟು ಯೂಸುಫ್ ಷರೀಫ್ ಹೆಸರಿನಲ್ಲಿ 1643.59 ಕೋಟಿ ರೂ. ಸ್ಥಿರಾಸ್ತಿ ಇದೆ. ಮೊದಲ ಪತ್ನಿ ಹೆಸರಿನಲ್ಲಿ 1.30 ಕೋಟಿ ರೂ. ಸ್ಥಿರಾಸ್ತಿ ಇದೆ. ಯೂಸುಫ್ ಷರೀಫ್ ಒಟ್ಟು 67.24 ಕೋಟಿ ರೂ. ಮೊತ್ತದ ಕೈ ಸಾಲ ಹೊಂದಿರುವುದಾಗಿಯೂ ಅಫಿಡವಿಟ್​​ನಲ್ಲಿ ವಿವರ ನೀಡಿದ್ದಾರೆ. ತಮ್ಮ ಮೇಲೆ ಒಟ್ಟು ನಾಲ್ಕು ಪ್ರಕರಣಗಳಿವೆ ಎಂಬ ಮಾಹಿತಿಯನ್ನೂ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details