ಬೆಂಗಳೂರು: ಭಾರತದ ಶಕ್ತಿ ಎಂದರೆ ಯುವ ಸಮೂಹ. ಇಡೀ ವಿಶ್ವದ ಎಲ್ಲ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಶ್ರೀಮಂತವಾಗಿರುವುದೇ "ಯುವ" ಸಮುದಾಯದಿಂದ. ಇವರಿಗೆ ನಮ್ಮ ಪ್ರಜಾಪ್ರಭುತ್ವದ ಆಶಯಗಳನ್ನು ಕೊಂಡೊಯ್ಯಬೇಕಾದ ಜವಾಬ್ದಾರಿ ಇದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ಡಾ. ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಯಲಹಂಕ ಬಳಿ ನಡೆದ ಯುವ ಮತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಈ ಬಾರಿಯ ಕರ್ನಾಟಕ ಚುನಾವಣೆ ಅತ್ಯಂತ ಪ್ರಮುಖವಾಗಿರುತ್ತದೆ. ಏಕೆಂದರೆ ಯುವ ಸಮೂಹದ ಪಾತ್ರ ಇದರಲ್ಲಿ ಮುಖ್ಯವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ಯುವ ಮತ ಅಭಿಯಾನ ಆರಂಭಿಸಿದೆ. ಕಳೆದ ಮಾರ್ಚ್ ಅಂತ್ಯದಿಂದ ಆರಂಭವಾದ ಅಭಿಯಾನಕ್ಕೆ 18 ಸಾವಿರಕ್ಕೂ ಹೆಚ್ಚು ಯುವಕರು ಕೈ ಜೋಡಿಸಿದ್ದಾರೆ ಎಂದರು.
ಹಕ್ಕು ಚಲಾಯಿಸುವುದನ್ನು ಮರೆಯಬಾರದು- ಡಾ. ಶಶಿ ತರೂರ್: ಯುವ ಮತದಾರರು ಅದರಲ್ಲಿಯೂ ಮೊದಲ ಬಾರಿಗೆ ಮತ ಚಲಾಯಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇವರೆಲ್ಲರೂ ಭವಿಷ್ಯದ ಕುಡಿಗಳು. ಯುವ ಸಮುದಾಯ ಜವಾಬ್ದಾರಿಯುತವಾಗಿ ತಮ್ಮ ಮತ ಚಲಾಯಿಸಬೇಕು. ಯಾರೊಬ್ಬರೂ ಈ ಹಕ್ಕು ಚಲಾಯಿಸುವುದನ್ನು ಮರೆಯಬಾರದು ಎಂದು ಡಾ. ಶಶಿ ತರೂರ್ ಕರೆ ನೀಡಿದರು. ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಯುವ ಮತ ಅಭಿಯಾನವನ್ನು ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಡೆಸುತ್ತಿರುವುದು ಸ್ವಾಗತಾರ್ಹ. ಈ ಅಭಿಯಾನ ಯಶಸ್ವಿಯಾಗಲಿ. ಯುವ ಮತದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿ.