ಬೆಂಗಳೂರು: ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಸಂಸ್ಥೆಯ ಎಲ್ಲ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಾರ್ಚ್ 8 ರಂದು ಬೆಂ.ಮ.ಸಾ.ಸಂಸ್ಥೆಯು ಎಲ್ಲಾ ಸಾರಿಗೆ ಸೇವೆಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಒಂದು ದಿನ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲು ಸರ್ಕಾರದ ಅನುಮೋದನೆ ನೀಡಿದೆ.
ಬಿಎಂಟಿಸಿಯ ಎಲ್ಲ ಮಾದರಿಯ ಬಸ್‌ಗಳಲ್ಲಿ ಬುಧವಾರ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಬಹುದಾಗಿದೆ. ಎಸಿ, ವೋಲ್ವೊ ವಜ್ರ, ವಾಯುವಜ್ರ ಬಸ್‌ಗಳಲ್ಲಿಯೂ ಹಣ ನೀಡದೇ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ನಿತ್ಯ ಸರಾಸರಿ 8-9 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೂ ಬಿಎಂಟಿಸಿ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಈಗಾಗಲೇ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ ಹೋಟೆಲ್ಗಳಲ್ಲಿ ಕೊಠಡಿ ಬುಕ್ಕಿಂಗ್ ಮೇಲೆ ಮಹಿಳೆಯರಿಗೆ ಶೇ 50ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಮಾರ್ಚ್ 8 ರಂದು ಆಚರಿಸಲಾಗುತ್ತಿರುವ 48ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಪ್ರವಾಸಿಗರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯಾದ್ಯಂತ ನಿರ್ವಹಣೆ ಮಾಡುತ್ತಿರುವ ಮಯೂರ ಗ್ರೂಪ್ ಹೋಟೆಲ್ಗಳಲ್ಲಿ ಈ ರಿಯಾಯಿತಿ ನೀಡಲಾಗಿದೆ. ಕೊಠಡಿ ಬುಕ್ಕಿಂಗ್ ಮೇಲೆ ಶೇ 50ರಷ್ಟು ಹಾಗೂ ಊಟೋಪಹಾರದ ಮೇಲೆ ಶೇ 20ರಷ್ಟು ರಿಯಾಯಿತಿ ನೀಡಿ ವಿಶೇಷ ಕೊಡುಗೆ ನೀಡಲಾಗಿದೆ.