ಕರ್ನಾಟಕ

karnataka

ETV Bharat / state

ಒಂಟಿ ಮನೆ ಮಹಿಳೆಯ ಕೊಲೆ, ದರೋಡೆ: ಆರೋಪಿಗಳ ಕಾಲಿಗೆ ಗುಂಡಿಕ್ಕಿ ಬಂಧನ - anekal crime news

ಕೆಲ ದಿನಗಳ ಹಿಂದೆ ಒಂಟಿ ಮನೆಯಲ್ಲಿದ್ದ ಮಹಿಳೆಯನ್ನು ಹತ್ಯೆ ಮಾಡಿ ಆಕೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ ಆಗಿದ್ದರು. ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ಆನೇಕಲ್​​ನಲ್ಲಿ ನಡೆದಿದೆ.

anekal
ಆರೋಪಿಗಳಿಬ್ಬರ ಕಾಲಿಗೆ ಪೊಲೀಸ್ ಗುಂಡು

By

Published : Sep 22, 2020, 11:49 PM IST

ಆನೇಕಲ್:ತಾಲೂಕಿನ ಒಂಟಿ ಮನೆಯಲ್ಲಿದ್ದ ಮಹಿಳೆಯ ಕೊಲೆ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಒಂಟಿ ಮನೆಯಲ್ಲಿದ್ದ ಮಹಿಳೆಯನ್ನು ಹತ್ಯೆ ಮಾಡಿ ಆಕೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ ಆಗಿದ್ದರು. ಒಂದು ವಾರ ಕಳೆದರು ಪೊಲೀಸರಿಗೆ ಆರೋಪಿಗಳ ಬಗ್ಗೆ ಸುಳಿವೂ ಸಿಗಲಿಲ್ಲ. ಈ ವೇಳೆ ಹಳೆ ಪ್ರಕರಣಗಳ ಆರೋಪಿಗಳ ಬೆರಳಚ್ಚಿನ ನೆರವಿನಿಂದ ಐವರ ದರೋಡೆಕೋರರ ತಂಡವನ್ನು ಪತ್ತೆ ಹಚ್ಚುವಲ್ಲಿ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳ ಬಂಧನ

ಆರೋಪಿಗಳು ಆನೇಕಲ್-ಮುತ್ಯಾಲಮಡುವಿನ ಮುಖ್ಯರಸ್ತೆಯ ಪಾಳು ಬಿದ್ದ ಮನೆಯಲ್ಲಿ ಅವಿತಿರುವ ಮಾಹಿತಿ ಪಡೆದ ಪೊಲೀಸರು ಬೆಳಗ್ಗೆ 5.30ರ ಸುಮಾರಿಗೆ ದಾಳಿ ನಡೆಸಿದ್ದಾರೆ. ಆನೇಕಲ್ ಹುಸ್ಕೂರು ಮೂಲದ ಸೈಕೋ ವೇಲು ಮತ್ತು ಆಂಧ್ರದ ಬಾಲು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಇಬ್ಬರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಸೆ.10ರಂದು ಹೆಬ್ಬಗೋಡಿ-ಹುಸ್ಕೂರು ವ್ಯಾಪ್ತಿಯ ಸಿಂಗೇನ ಅಗ್ರಹಾರದ ಪರಿಧಿಯಲ್ಲಿ ಒಂಟಿಯಾಗಿ ಮನೆಯಲ್ಲಿದ್ದ ಶ್ವೇತಾ ಎಂಬ ಮಹಿಳೆಯ ಮನೆಗೆ ರಾತ್ರಿ ನುಗ್ಗಿದ ಐವರು ಆರೋಪಿಗಳು ಮನೆಯಲ್ಲಿದ್ದ ನಗ ನಾಣ್ಯಗಳ ಪತ್ತೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಪತಿ ಮುರಳಿ ಚಂದಾಪುರದ ಮೆಡಿಕಲ್ ಕೆಲಸದಲ್ಲಿದ್ದು, ಅತ್ತೆ ಮತ್ತು ಮಗ ಊರಿಗೆ ತೆರಳಿದ್ದರು.

ಇದೇ ಸಂದರ್ಭಕ್ಕಾಗಿ ಕಾದು ಕುಳಿತಿದ್ದ ಆರೋಪಿಗಳು ಮನೆಗೆ ನುಗ್ಗಿದ್ದಾರೆ. ಕಬ್ಬಿಣ ಪೆಟ್ಟಿಗೆಯ ಕೀಲಿ ಕೊಡುವಂತೆ ಮಹಿಳೆಯನ್ನು ಎಳೆದಾಡಿದ್ದಾರೆ. ಬಳಿಕ ಮಹಿಳೆಯನ್ನು ಕೊಲೆಗೈದು ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಸಾವಿರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು.‌ ಈ ಮುಂಚೆಯೇ ದರೋಡೆ ಪ್ರಕರಣಗಳಲ್ಲಿ ಪಳಗಿದ್ದ ಆರೋಪಿಗಳು ಮೊಬೈಲ್ ಬಳಸದೆ ಅವರಿವರ ಮೊಬೈಲ್​ನಲ್ಲಿ ಕರೆ ಮಾಡಿ ತಪ್ಪಿಸಿಕೊಂಡಿದ್ದರು. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು ಎಂದು ಬೆಂಗಳೂರು ಗ್ರಾಮಾಂತರ ಎಎಸ್ಪಿ ಲಕ್ಷ್ಮಿ ಗಣೇಶ್ ತಿಳಿಸಿದ್ದಾರೆ.

ಕೊಲೆ ಆರೋಪಿಗಳು ತಾವು ಗುರುತು ಸಿಗಬಾರದೆಂದು ತಮ್ಮ ತಲೆ ಕೂದಲು ದೇವಸ್ಥಾನದಲ್ಲಿ ತೆಗೆಸಿ ಆನೇಕಲ್-ಮುತ್ಯಾಲಮಡುವಿನ ರಸ್ತೆಯ ಪಾಳು ಮನೆಯಲ್ಲಿ ವಾಸವಿದ್ದರು. ನಿನ್ನೆ ಬೆಳಗ್ಗೆ ತಮಿಳುನಾಡಿನ ಕಡೆಗೆ ಹೊರಡಲು ಹೊಂಚು ಹಾಕಿದ್ದರು. ಈ ಮಾಹಿತಿ ಅರಿತಿದ್ದ ಪೊಲೀಸರು ಮುಂಜಾನೆ ಆರೋಪಿಗಳು ಅವಿತುಕೊಂಡಿದ್ದ ಸ್ಥಳಕ್ಕೆ ತೆರಳಿದ್ದರು.

ಪೊಲೀಸರನ್ನು ಕಂಡ ತಕ್ಷಣ ತಮ್ಮ ಬಳಿಯಿದ್ದ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಠಾಣೆಯ ಓರ್ವ ಕಾನ್ಸ್​​ಟೇಬಲ್​ಗೆ ಗಾಯವಾಗಿದೆ. ಆಗ ಆತ್ಮರಕ್ಷಣೆಗಾಗಿ ಹೆಬ್ಬಗೋಡಿ ಇನ್​ಸ್ಪೆಕ್ಟರ್ ಗೌತಮ್ ಮತ್ತು ಬನ್ನೇರುಘಟ್ಟ ಎಸ್ಐ ಗೋವಿಂದ್ ಇಬ್ಬರು ಆರೋಪಿಗಳ ಬಲ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.

ಗಾಯಗೊಂಡ ಕಾನ್ಸ್​​ಟೇಬಲ್​ ಮತ್ತು ಆರೋಪಿಗಳಿಗೆ ಆನೇಕಲ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ABOUT THE AUTHOR

...view details