ಬೆಂಗಳೂರು: ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ಹಾಗೂ ನೋ ಪಾರ್ಕಿಂಗ್ ವಲಯದಲ್ಲಿ ಪಾರ್ಕಿಂಗ್ ಮಾಡುವವರ ವಿರುದ್ಧ ನಗರ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕೇವಲ ಆರು ದಿನಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿದ್ದ 4000 ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಏ.23 ರಿಂದ 28ರವರೆಗೆ ನಡೆಸಿದ ನಗರ ಸಂಚಾರಿ ಪೊಲೀಸರ ಕಾರ್ಯಾಚರಣೆಯಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 9,916 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ 2,500 ಪಾರ್ಕಿಂಗ್, 500 ಬೈಕ್ ಸವಾರರು ಮತ್ತು 791 ಒತ್ತುವರಿಯಾದ ಸ್ಥಳಗಳಾಗಿವೆ.
ಇದರಲ್ಲಿ 11 ಪ್ರಕರಣಗಳನ್ನು ಐಪಿಸಿ ಸೆಕ್ಷನ್ 283 (ಸಾರ್ವಜನಿಕ ಮಾರ್ಗದಲ್ಲಿ ಅಡಚಣೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಶ್ಚಿಮ ವಲಯದಲ್ಲಿ 2,070, ಪೂರ್ವ ವಲದಲ್ಲಿ 1,506 ಕೇಸ್ ದಾಖಲಿಸಲಾಗಿದೆ. ಅಲ್ಲದೇ ಪಾದಚಾರಿ ಮಾರ್ಗಗಳಲ್ಲಿ ಅತಿಕ್ರಮಣವಾಗಿ ಚಾಲನೆ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು, ಮಲ್ಲೇಶ್ವರದ 8ನೇ ಕ್ರಾಸ್, ಈಸ್ಟ್ ಪಾರ್ಕ್ ರಸ್ತೆ ಮತ್ತು ಸ್ಯಾಂಪಿಗ್ ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದ ಮಾರಾಟಗಾರರನ್ನು ಮತ್ತು ಬೇರೆ ಚಟುವಟಿಕೆಗಳನ್ನು ನಡೆಸುತ್ತಿದ್ದವರನ್ನ ತೆರವುಗೊಳಿಸಲಾಗಿದೆ.