ಬೆಂಗಳೂರು : ಯಾವುದೇ ಕೆಲಸ ಇಲ್ಲದಿದ್ದರೂ ವಿನಾಕಾರಣ ಮತ್ತು ಸಂಬಂಧವಿಲ್ಲದ ವ್ಯಕ್ತಿಗಳು ಹೈಕೋರ್ಟ್‌ನಲ್ಲಿನ ಕೋರ್ಟ್ಗಳಿಗೆ ಪ್ರವೇಶ ಮಾಡಿದಲ್ಲಿ ಅಂತಹವರನ್ನು ಬಂಧಿಸಿ ನೇರವಾಗಿ ಜೈಲಿಗೆ ಕಳುಹಿಸಲಾಗುವುದು ಹೈಕೋರ್ಟ್ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ. ವಕೀಲರು, ಕಾನೂನು ವಿದ್ಯಾರ್ಥಿಗಳು, ಕೇಸ್ಗೆ ಸಂಬಂಧಿಸಿದ ಕಕ್ಷಿದಾರರು, ಅಧಿಕಾರಿಗಳು ಹಾಗೂ ಸಕಾರಣ ಹೊಂದಿದ ವ್ಯಕ್ತಿಗಳಿಗೆ ಮಾತ್ರವೇ ನ್ಯಾಯಾಲಯ ಸಭಾಂಗಣ ಪ್ರವೇಶಕ್ಕೆ ಅವಕಾಶವಿರಲಿದೆ. ಆದರೆ, ಯಾವುದೇ ಕೆಲಸವಿಲ್ಲದಿದ್ದರೂ, ನ್ಯಾಯಾಲಯಕ್ಕೆ ಬಂದು ಹಾಜರಾದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ಪ್ರಕರಣವೊಂದರ ವಿಚಾರಣೆ ವೇಳೆ ಎಚ್ಚರಿಕೆ ನೀಡಿದೆ.
ಸಚಿವ ಮುನಿರತ್ನ ವಿರುದ್ಧ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ಅಕ್ರಮ ಆರೋಪದ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ಮತ್ತು ಪಾಟಿ ಸವಾಲು ನಡೆಸುತ್ತಿತ್ತು. ಈ ಸಂರ್ಭದಲ್ಲಿ ಹಿರಿಯ ವಕೀಲ ಜಿ.ಕೃಷ್ಣಮೂರ್ತಿ ಅವರು ಮುನಿರತ್ನ ಪರ ಹಾಜರಾಗಿದ್ದು, ತುಳಸಿ ಮುನಿರಾಜು ಗೌಡ ಅವರನ್ನು ಪಾಟಿ ಸವಾಲಿಗೆ ಒಳಪಡಿಸುತ್ತಿದ್ದರು. ಸುದೀರ್ಘ ಕಲಾಪದ ಅವಧಿಯುದ್ದಕ್ಕೂ ಹಾಜರಿದ್ದ ಕೆಲವು ವ್ಯಕ್ತಿಗಳನ್ನು ಗಮನಿಸಿದ ನ್ಯಾಯಪೀಠವು, ಕಲಾಪ ಪೂರ್ಣಗೊಳ್ಳುತ್ತಿದ್ದಂತೆಯೇ ಕಳವಳ ವ್ಯಕ್ತಪಡಿಸಿತು.
ಹೈಕೋರ್ಟ್ ಎಂಬುದು ಸಾಮಾನ್ಯವಲ್ಲ. ಈ ಕೋರ್ಟ್ ಹಾಲ್‌ನಲ್ಲಿ ಸಂಬಂಧವಿಲ್ಲದ ಅನೇಕ ಮುಖಗಳು ಕಾಣುತ್ತಿವೆ. ಇದು ವೈ ಕೆಟಗರಿಯ ಭದ್ರತೆ ಹೊಂದಿರುವ ನ್ಯಾಯಾಲಯ ಸಭಾಂಗಣ. ಕಲಾಪದಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳು ಯಾವ ಕಾರಣಕ್ಕಾಗಿ ಪ್ರವೇಶ ಇಲ್ಲಿಗೆ ಬಂದಿದ್ದಾರೆ ಎಂದು ಪ್ರಕರಣದ ಪರ ವಕೀಲರನ್ನು ಪ್ರಶ್ನಿಸಿತು. ಅಂತೆಯೇ, ಇವತ್ತು ಹಾಜರಿದ್ದ ಸಂಬಂಧವಿಲ್ಲದ ವ್ಯಕ್ತಿಗಳ ಇತ್ಯೋಪರಿಗಳನ್ನು ಸಂಗ್ರಹಿಸಿ ಎಂದು ಕೋರ್ಟ್ ಅಧಿಕಾರಿಗೆ ಸೂಚನೆ ನೀಡಿತು.