ಕರ್ನಾಟಕ

karnataka

ETV Bharat / state

ರಾಜ್ಯ ವಿಧಾನಸಭೆಗೆ ಅತಿ ಹೆಚ್ಚು ಬಾರಿ ಆಯ್ಕೆಯಾದ ಶಾಸಕ ಕಲಿಗಳು: ಅಖಾಡದಲ್ಲಿ ಇವರು ಬಾಹುಬಲಿಗಳು!

ವಿಧಾನಸಭೆ ಚುನಾವಣೆಯಲ್ಲಿ ಹಳೆಯ ಶಾಸಕ ಕಲಿಗಳು ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿ ಇವರ ಹಿಡಿತ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ. ಕನಿಷ್ಠ 5, ಗರಿಷ್ಠ 8 ಬಾರಿ ಗೆದ್ದ ಬಲಾಢ್ಯ ಶಾಸಕರ ಪಟ್ಟಿ ಇಲ್ಲಿದೆ.

ರಾಜ್ಯ ವಿಧಾನಸಭೆಯ ಹಳೆಯ ಶಾಸಕ ಕಲಿಗಳು
ರಾಜ್ಯ ವಿಧಾನಸಭೆಯ ಹಳೆಯ ಶಾಸಕ ಕಲಿಗಳು

By

Published : Apr 24, 2023, 7:45 PM IST

Updated : Apr 24, 2023, 8:03 PM IST

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ 224, ಕಾಂಗ್ರೆಸ್​ 223, ಜೆಡಿಎಸ್​ 211 ಹುರಿಯಾಳುಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ ಹಲವರು ಹೊಸಬರಾದರೆ, ಇನ್ನು ಹಲವರು 6 ರಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ವಿಧಾನಸಭೆಯ ಹಿರಿಯ ಶಾಸಕರೆಂದರೆ ಅದು ಕಾಂಗ್ರೆಸ್​​ನ ಆರ್​ವಿ ದೇಶಪಾಂಡೆ. ಇದಕ್ಕೂ ಮೊದಲು ಮಲ್ಲಿಕಾರ್ಜುನ್​ ಖರ್ಗೆ ಅವರು ಸದನದ ಹಿರಿಯ ಶಾಸಕರಾಗಿದ್ದರು. ಅವರು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಸದನದ ಹಿರಿಯ ಶಾಸಕ ಆರ್​​ವಿ ದೇಶಪಾಂಡೆ

ಆರ್​ ವಿ ದೇಶಪಾಂಡೆ: ಅತ್ಯಂತ ಹೆಚ್ಚು ಬಾರಿ ಆಯ್ಕೆ ಆದ ಶಾಸಕ - 8 ಬಾರಿ ಗೆಲುವು:ಕಾಂಗ್ರೆಸ್​ ಹಿರಿಯ ನಾಯಕ ಆರ್​ ವಿ ದೇಶಪಾಂಡೆ ಅವರು 8 ಬಾರಿ ಚುನಾವಣಾ ಕಣದಲ್ಲಿ ಗೆಲುವು ಸಾಧಿಸಿದ್ದಾರೆ. 1 ಬಾರಿಗೆ ಸೋಲು ಕಂಡಿದ್ದು, ಇದೀಗ 10 ನೇ ಬಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 1983 ರಿಂದ 1994 ರವರೆಗೆ ಜನತಾ ಪರಿವಾರದಿಂದ ಸ್ಪರ್ಧಿಸಿ 4 ಬಾರಿ ಶಾಸಕರಾಗಿದ್ದರು. 1999 ರಲ್ಲಿ ಕಾಂಗ್ರೆಸ್​ ಸೇರಿದರು. ಬಳಿಕ 2004, 2013, 2018 ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 2008 ರಲ್ಲಿ ಒಮ್ಮೆ ಮಾತ್ರ ಶಿಷ್ಯ ಸುನೀಲ್​ ಹೆಗಡೆ ವಿರುದ್ಧ ಸೋಲು ಕಂಡಿದ್ದರು. ಮಲ್ಲಿಕಾರ್ಜುನ್​ ಖರ್ಗೆ ಬಳಿಕ ಸದನದಲ್ಲಿ ಹೆಚ್ಚು ಬಾರಿ ಆಯ್ಕೆ ಆದ ಹಿರಿಯ ಸದಸ್ಯರಾಗಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ: 8 ಬಾರಿ ಗೆಲುವು( ಉಪ ಚುನಾವಣೆ ಸೇರಿ) 3 ಬಾರಿ ಸೋಲು( 7 ಅವಧಿಗೆ ಶಾಸಕರು)-ಮಾಜಿ ಸಿಎಂ ಸಿದ್ದರಾಮಯ್ಯ ಅವರು 10 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಉಪಚುನಾವಣೆ ಸೇರಿ 8 ಬಾರಿ ಗೆಲುವು ಸಾಧಿಸಿದ್ದಾರೆ. ಉಪ ಚುನಾವಣೆಯಲ್ಲಿ 250 ಮತಗಳಿಂದ ಶಿವಬಸಪ್ಪ ವಿರುದ್ಧ ಗೆಲುವು ಕಂಡಿದ್ದರು. ಇದಲ್ಲದೇ, ವಿಧಾನಸಭಾ ರಾಜಕೀಯ ಜೀವನದಲ್ಲಿ ಒಟ್ಟು ಮೂರು ಬಾರಿ ಸೋಲು (1989- 1999, 2018 ಚಾಮುಂಡೇಶ್ವರಿ) ಕಂಡಿದ್ದಾರೆ. ಕಳೆದ 2018 ಚುನಾವಣೆಯಲ್ಲಿ ಬಾದಾಮಿಯಲ್ಲಿ ಗೆದ್ದರೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದರು. ಸಿಎಂ ಸ್ಥಾನದಲ್ಲಿದ್ದಾಗಲೇ ತಮ್ಮ ಸ್ವ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುಂಡಿದ್ದು ವಿಶೇಷ. ಆದರೆ ಬಾದಾಮಿಯಲ್ಲಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​

ಡಿಕೆ ಶಿವಕುಮಾರ್​: 7 ಬಾರಿ ಶಾಸಕರು:ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್​ ಅವರು ಈವರೆಗೂ 7 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. 8 ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. 1989 ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 1999 ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ 56 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. 2008 ರಿಂದ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಗೆಲ್ಲುತ್ತಾ ಬಂದಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ ಜಗದೀಶ್​ ಶೆಟ್ಟರ್​

ಜಗದೀಶ ಶೆಟ್ಟರ್: 6 ಬಾರಿ ಶಾಸಕರು:6 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದಾರೆ. 2023 ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ನಿರಾಕರಿಸಿದ್ದು, 7 ನೇ ಬಾರಿ ಆಯ್ಕೆ ಬಯಸಿ ಕಾಂಗ್ರೆಸ್​ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಸಚಿವ, ವಿಧಾನಸಭೆ ಸ್ಪೀಕರ್, ವಿಧಾನಸಭೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. 1994 ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.

ಮಾಜಿ ಸ್ಪೀಕರ್​ ರಮೇಶ್​ಕುಮಾರ್​

ಕೆಆರ್​ ರಮೇಶ್​ ಕುಮಾರ್​​: 6 ಬಾರಿ ಶಾಸಕರು:ಸಚಿವರು, ಮಾಜಿ ಸ್ಪೀಕರ್ ಆಗಿರುವ ಕೆ.ಆರ್.​ ರಮೇಶ್​ಕುಮಾರ್​ ಅವರು 1978 ರಿಂದ ಚುನಾವಣಾ ರಾಜಕೀಯದಲ್ಲಿದ್ದಾರೆ. 1978 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. ಇದಾದ ಬಳಿಕ 1983 ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದರು. 1985 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1989 ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತರು. 1994 ರಲ್ಲಿ ಜನತಾ ದಳದಿಂದ ಗೆದ್ದು, ಸ್ಪೀಕರ್​ ಆಗಿ ಆಯ್ಕೆಯಾದರು. 1999 ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಸೋಲು ಕಂಡರು. 2004 ರಲ್ಲಿ ಮತ್ತೆ ಕಾಂಗ್ರೆಸ್​ ಸೇರಿ ಸತತವಾಗಿ ಗೆಲುತ್ತಾ ಬಂದಿದ್ದಾರೆ.

ವಿಶ್ವೇಶ್ವರ ಹೆಗೆಡೆ ಕಾಗೇರಿ: 6 ಬಾರಿ ಶಾಸಕರು:ವಿಧಾನಸಭೆ ಸ್ಪೀಕರ್​ ಆಗಿರುವ ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1994, 1999, 2004, 2008, 2013, 2018 ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ನಾಮ ಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.

ಹೆಚ್​ಡಿ ರೇವಣ್ಣ: 6 ಬಾರಿ ಗೆಲುವು:1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೆಚ್. ಡಿ. ರೇವಣ್ಣ 1999, 2004, 2008, 2013 ಮತ್ತು 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಒಟ್ಟು ಆರು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇವರು ಸಹ 7 ನೇ ಬಾರಿ ಹೊಳೆನರಸೀಪುರದಿಂದಲೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಾಂಗ್ರೆಸ್​ ನಾಯಕ ಎಂಬಿ ಪಾಟೀಲ್​

ಎಂ ಬಿ ಪಾಟೀಲ್: 5 ಬಾರಿ ಗೆಲುವು:ಕಾಂಗ್ರೆಸ್​​​​​ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ ಬಿ ಪಾಟೀಲ್​ ಮೊದಲ ಬಾರಿಗೆ 1991ರಲ್ಲಿ ತಿಕೋಟಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಶಾಸಕರಾದರು. 2004ರಲ್ಲಿ ತಿಕೋಟಾದಿಂದ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಬಬಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿದು ಆಯ್ಕೆಗೊಂಡಿದ್ದು, 2013, 2018ರಲ್ಲಿಯೂ ಇದೇ ಕ್ಷೇತ್ರದಿಂದ ಆಯ್ಕೆ ಆಗಿ ಪ್ರಭಾವಿ ಸಚಿವರು ಹಾಗೂ ನಾಯಕರಾಗಿ ಪ್ರವರ್ಧನಮಾನಕ್ಕೆ ಬಂದಿದ್ದಾರೆ. ಇವರು ಐದು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಈ ಸಲವೂ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ

ವಿ.ಸೋಮಣ್ಣ: 5 ಬಾರಿ ಶಾಸಕರು:ಲಿಂಗಾಯತ ಸಮುದಾಯದ ಪ್ರಭಾವಿ ರಾಜಕಾರಣಿಯಾಗಿರುವ ವಿ ಸೋಮಣ್ಣ ಅವರು ರಾಜಕೀಯವಾಗಿ ಗಟ್ಟಿ ನಾಯಕ. 5 ಬಾರಿ ಶಾಸಕರಾಗಿ, 2 ಬಾರಿ ವಿಧಾನಪರಿಷತ್​ ಸದಸ್ಯರಾಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. 1994 ರಲ್ಲಿ ಜನತಾದಳದಿಂದ ಬಿನ್ನಿಪೇಟೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 1999 ರಲ್ಲಿ ಅದೇ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಿಸಿದರು. 2004, 2008 ರಲ್ಲಿ ಗೋವಿಂದರಾಜ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದು ಶಾಸಕರಾದರು. ಬದಲಾದ ರಾಜಕಾರಣದಲ್ಲಿ ಬಿಜೆಪಿ ಸೇರಿದ ಸೋಮಣ್ಣ 2010 ರಿಂದ 2018 ರವರೆಗೆ ವಿಧಾನಪರಿಷತ್​ಗೆ ಆಯ್ಕೆಯಾದರು. 2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾದರು. ಇದೀಗ 6 ನೇ ಬಾರಿಗೆ ಶಾಸಕತ್ವ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಿಂದ ಸೋಮಣ್ಣ ಸ್ಪರ್ಧೆ ಮಾಡುತ್ತಿದ್ದಾರೆ.

ಸುರೇಶ್​ ಕುಮಾರ್​: 5 ಬಾರಿ ಶಾಸಕರು:1994, 1999, 2008, 2013, 2018 ರ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004 ರ ಚುನಾವಣೆಯಲ್ಲಿ ಒಂದು ಬಾರಿ ಸೋಲು ಕಂಡಿದ್ದರು. ರಾಜಾಜಿನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುರೇಶ್​ ಕುಮಾರ್​​​ 7ನೇ ಬಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಜಿಎಚ್​ ತಿಪ್ಪಾರೆಡ್ಡಿ: 5 ಬಾರಿ ಗೆಲುವು:ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು 1994 ರಲ್ಲಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2008 ರ ಚುನಾವಣೆಯಲ್ಲಿ ಜೆಡಿಎಸ್​​ನಿಂದ ಕಣಕ್ಕಿಳಿದು ಸೋಲು ಕಂಡಿದ್ದರು. ಇದಾದ ಬಳಿಕ 2010 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2013 ರಲ್ಲಿ ವಿಧಾನಪರಿಷತ್​ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. 2013, 2018 ಸೇರಿ 5 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. 2 ಬಾರಿ ವಿಧಾನ ಪರಿಷತ್​ಗೆ ಆಯ್ಕೆಯಾಗಿದ್ದರು. ಇದೀಗ 8 ನೇ ಸಲ ನಾಮಪತ್ರ ಸಲ್ಲಿಸಿದ್ದಾರೆ.

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ

ಹೆಚ್​​ಡಿ ಕುಮಾರಸ್ವಾಮಿ: 4 ಬಾರಿ ಗೆಲುವು:ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು 2 ಬಾರಿ ಲೋಕಸಭೆ, 4 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 1996, 2009 ರ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಮತ್ತು ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ 4 ಬಾರಿ ಜಯ ಕಂಡಿದ್ದಾರೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನನ್ನಪಟ್ಟಣ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಉಳಿದಂತೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್​ ಸಹ 1994 ರಲ್ಲಿ ಸೋಮವಾರಪೇಟೆಯಿಂದ ಜಯಿಸಿದ್ದ ಇವರು 1999ರಲ್ಲೂ ಗೆಲುವು ಕಂಡಿದ್ದರು. ಆ ಬಳಿಕ 2004ರಲ್ಲಿ ಸೋಲು ಕಂಡಿದ್ದರು. ಆ ಬಳಿಕ ಮಡಿಕೇರಿಯಿಂದ 2008 ಇಲ್ಲಿವರೆಗೂ ಅಂದರೆ 2018 ರವರೆಗೂ ಮೂರುಬಾರಿ ಹಾಗೂ ಒಟ್ಟಾರೆ ಐದು ಬಾರಿ ಗೆಲುವು ಸಾಧಿಸಿದ್ದಾರೆ.

ಇನ್ನು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ 1999 ರಲ್ಲಿ ಹೊರತು ಪಡಿಸಿ, 1983 ರಿಂದ 2018ರವರೆಗೆ ಒಟ್ಟು 8 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಇನ್ನು ಸಚಿವರಾಗಿದ್ದ ಎಸ್ ಅಂಗಾರ ಸಹ 1994 ರಿಂದ ಇಲ್ಲಿವರೆಗೂ ಆರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು.

ಓದಿ:ರಾಜ್ಯ ಚುನಾವಣಾ ಅಖಾಡಕ್ಕೆ ಧುಮುಕಿರುವ ಪ್ರಮುಖ ಅಭ್ಯರ್ಥಿಗಳ ಮೇಲಿದೆ ಹತ್ತು ಹಲವು ಪ್ರಕರಣಗಳು

Last Updated : Apr 24, 2023, 8:03 PM IST

ABOUT THE AUTHOR

...view details