ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಉದ್ಘಾಟನೆ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನ ಆಹ್ವಾನಿಸಲಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಬಿಜೆಪಿ ಸರ್ಕಾರ ಸಹ ಆಹ್ವಾನ ಪತ್ರವನ್ನು ಟ್ವೀಟ್ ಮಾಡುವ ಮೂಲಕ ಪ್ರದರ್ಶಿಸಿ ಕಾಲೆಳೆಯುವ ಕಾರ್ಯ ಮಾಡಿತ್ತು. ಸಮಾರಂಭ ನಡೆದ ದಿನದಿಂದಲೂ ಜೆಡಿಎಸ್ ಪಕ್ಷ ನಿರಂತರವಾಗಿ ಟ್ವೀಟಾಸ್ತ್ರ ಪ್ರಯೋಗ ಮಾಡುತ್ತಿದ್ದು, ಇದೀಗ ತಮ್ಮ ಆಕ್ರೋಶವನ್ನು ಮುಂದುವರಿಸಿರುವ ಜೆಡಿಎಸ್ ಪಕ್ಷ ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದೆ.
ಸುಳ್ಳಿನ ಪ್ರಚಾರವೇ ಬಿಜೆಪಿ ಸಂಸ್ಕಾರ: ಬೂಟಾಟಿಕೆ ದಾಸಯ್ಯನಿಗೆ ಮೈಯಲ್ಲಾ ಪಂಗನಾಮʼ ಎನ್ನುವಂತಿದೆ ಬಿಜೆಪಿ ಪರಿಸ್ಥಿತಿ. ಕೊಳಕು, ವಿಕೃತಿಗಳ ಮಹಾಸಂಗಮವೇ ಬಿಜೆಪಿ. ರಕ್ತಪೀಪಾಸುತನ, ನರಹಂತಕ ಮನಃಸ್ಥಿತಿಯೇ ಬಿಜೆಪಿಯ ನೈಜಮುಖ. ಆಪರೇಷನ್ ಕಮಲವೇ ಅದರ ಶಿಷ್ಟಾಚಾರ, ಸುಳ್ಳಿನ ಪ್ರಚಾರವೇ ಅದರ ಸಂಸ್ಕಾರ. ಎಚ್.ಡಿ. ದೇವೇಗೌಡರನ್ನು ಜೆಡಿಎಸ್ ಎಂದಿಗೂ ಜಾತಿ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಆದರೆ, ನರೇಂದ್ರ ಮೋದಿ ಅವರ ಅರ್ಧದಿನದ ʼಕರ್ನಾಟಕದ ಕಾಟಾಚಾರದ ಭೇಟಿʼ ಏನನ್ನು ಗುರಿ ಮಾಡಿಕೊಂಡಿತ್ತು? ಎನ್ನುವುದನ್ನು ಮಾಧ್ಯಮಗಳೇ ನಿರಂತರವಾಗಿ ವರದಿ ಮಾಡುತ್ತಿರುವುದು ಕಾಣುತ್ತಿಲ್ಲವೇ? ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ ಎಂದಿದ್ದಾರೆ.
ಮಾಜಿ ಪ್ರಧಾನಿಗಳನ್ನು ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಪ್ರಶ್ನೆ ಮಾಡಿದ್ದನ್ನೇ ʼಮಹಾ ಅಪರಾಧʼ ಎಂದು ಚಿತ್ರಿಸುತ್ತಿರುವ ಬಿಜೆಪಿಯ ವಿಕೃತಿ ಆದಿಯಿಂದಲೂ ಧರ್ಮ, ಜಾತಿ ಮತ್ತು ಸುಳ್ಳಿನ ಸುತ್ತಲೇ ಗಿರಕಿ ಹೊಡೆಯುತ್ತಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ಸತ್ಯವನ್ನು ಮಿಥ್ಯೆ ಎನ್ನಲಾದಿತೆ? ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಸ್ತಿತ್ವದ ಭಯ ಎನ್ನುವುದು ಹಾಗಿರಲಿ. ಪ್ರಧಾನಿಯ ನಾಮಬಲ ಒಂದಿಲ್ಲದಿದ್ದರೆ ನಿಮಗೆ ಠೇವಣಿಗೂ ಖಾತರಿ ಇಲ್ಲ. ಇನ್ನು 6 ತಿಂಗಳಲ್ಲಿ ಮೋದಿ ಅವರು ಎಷ್ಟು ಸಲ ಕರ್ನಾಟಕಕ್ಕೆ ಓಡೋಡಿ ಬರುತ್ತಾರೋ ನೋಡೋಣ. ಅಲ್ಲಿ ನಿಮ್ಮ ಯೋಗ್ಯತೆಯ ಅಳತೆ ಎಷ್ಟು? ಎಂಬುದು ಗೊತ್ತಾಗುತ್ತದೆ ಎಂದಿದೆ.