ಕರ್ನಾಟಕ

karnataka

ETV Bharat / state

ಅನ್ನದಾತನ ಆಕ್ರೋಶಕ್ಕೆ ಕಾರಣವಾದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ... ಅಷ್ಟಕ್ಕೂ ಏನಿದೆ ಅದರಲ್ಲಿ?

ಕೇಂದ್ರದಲ್ಲಿ ಯುಪಿಎ ಸರ್ಕಾರ 2014ರಲ್ಲಿ ರೈತರಿಗೆ ಅನುಕೂಲವಾಗಲೆಂದು ದುಪ್ಪಟ್ಟು ಪರಿಹಾರ ನೀಡುವ, ಜನಾಭಿಪ್ರಾಯಕ್ಕೆ ಆದ್ಯತೆ ನೀಡುವ ಭೂ ಸ್ವಾಧೀನ, ನ್ಯಾಯಯುತ ನಷ್ಟ ಪರಿಹಾರದ ಹಕ್ಕು, ಪುನರ್ವಸತಿ, ಪುನರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಧಿನಿಯಮ-2013ನ್ನು ಜಾರಿಗೆ ತಂದಿತ್ತು.

ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ

By

Published : Jun 10, 2019, 5:39 PM IST

Updated : Jun 10, 2019, 7:46 PM IST

ಬೆಂಗಳೂರು: ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಇದೀಗ ರೈತರ ಕಣ್ಣು ಕೆಂಪಾಗಿಸಿದ್ದು, ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಮೈತ್ರಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರೈತರ ಕೆಂಗಣ್ಣಿಗೆ ಗುರಿಯಾಗಲು ಕಾರಣವೇನು?

ಕೇಂದ್ರದಲ್ಲಿ ಯುಪಿಎ ಸರ್ಕಾರ 2014ರಲ್ಲಿ ರೈತರಿಗೆ ಅನುಕೂಲವಾಗಲೆಂದು ದುಪ್ಪಟ್ಟು ಪರಿಹಾರ ನೀಡುವ, ಜನಾಭಿಪ್ರಾಯಕ್ಕೆ ಆದ್ಯತೆ ನೀಡುವ ಭೂ ಸ್ವಾಧೀನ ಅಧಿನಿಯಮ-2013ನ್ನು ಜಾರಿಗೆ ತಂದಿತ್ತು.

ರೈತ ಸ್ನೇಹಿಯಾಗಿದ್ದ ಈ ಮೂಲ ಕಾಯ್ದೆಗೆ ತಿದ್ದುಪಡಿ ತಂದಿರುವ ಮೈತ್ರಿ ಸರ್ಕಾರ, ಫೆ. 13, 2019ರ ಬಜೆಟ್ ಅಧಿವೇಶನದಲ್ಲಿ ಯಾವುದೇ ಚರ್ಚೆಗಳಲಿಲ್ಲದೆ ಗದ್ದಲದ ನಡುವೆ 'ಭೂ ಸ್ವಾಧೀನ (ಕರ್ನಾಟಕ ತಿದ್ದುಪಡಿ) ವಿಧೇಯಕ-2019'ನ್ನು ಅಂಗೀಕರಿಸಿತ್ತು.

ಸದನದಲ್ಲಿ ಅಂಗೀಕರಿಸಿದ ತಿದ್ದುಪಡಿ ವಿಧೇಯಕವನ್ನು ಸದ್ಯ ರಾಷ್ಟ್ರಪತಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ. ರೈತರ ಹಿತಾಸಕ್ತಿಗೆ ಮಾರಕವಾಗಿರುವ ಈ ಭೂ ಸ್ವಾಧೀನ ತಿದ್ದುಪಡಿ‌ ಕಾಯ್ದೆ ರೈತ ಹೋರಾಟಗಾರರನ್ನು ಬೀದಿಗಿಳಿಯುವಂತೆ ಮಾಡಿದೆ.

ತಿದ್ದುಪಡಿ ತರಲು ಸರ್ಕಾರ ಕೊಟ್ಟ ಕಾರಣ

  • ಗುಜರಾತ್, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸರ್ಕಾರಗಳು ತಮಗೆ ಅನುವಾಗುವಂತೆ ಮೂಲ ಭೂ ಸ್ವಾಧೀನ ಕಾಯ್ದೆ-2013ಕ್ಕೆ ಕೆಲ ತಿದ್ದುಪಡಿಗಳನ್ನು ತಂದಿವೆ
  • ಮೂಲಭೂತ ಸೌಕರ್ಯ ಯೋಜನೆ, ರಾಷ್ಟ್ರೀಯ ಹೆದ್ದಾರಿ ಯೋಜನೆ, ಕುಡಿಯುವ ನೀರಿನ ಯೋಜನೆ, ಇತರ ಬೃಹತ್ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಮೂಲ‌ ಭೂ ಸ್ವಾಧೀನ ಕಾಯ್ದೆ ಅಡ್ಡಿ
  • ರಾಜ್ಯದಲ್ಲಿ ಹಲವು ಪ್ರಮುಖ ಯೋಜನೆಗಳಿಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಮೂಲ‌ ಅಧಿನಿಯಮ‌ ತೊಂದರೆ
  • ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭೂ ಸ್ವಾಧೀನಕ್ಕೆ ಅನುವಾಗಲು ಕಾಯ್ದೆಗೆ ತಿದ್ದುಪಡಿ


ಕೇಂದ್ರದ ಮೂಲ ಅಧಿನಿಯಮದಲ್ಲಿ ಏನಿದೆ?

  • ಯಾವುದೇ ಯೋಜನೆಗಳ ಭೂ ಸ್ವಾಧೀನಕ್ಕಾಗಿ ಶೇ. 80ರಷ್ಟು ಜನರ ಸಮ್ಮತಿ ಅಗತ್ಯ.
  • ಯೋಜನೆಯಿಂದ ಸಮುದಾಯ, ಪರಿಸರದ ಮೇಲಾಗುವ ದುಷ್ಪರಿಣಾಮದ ಪೂರ್ವಭಾವಿ ಅಂದಾಜು ಸಲ್ಲಿಸಬೇಕು.
  • ಸ್ವಾಧೀನ‌ಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡಬೇಕು.
  • ನೀರಾವರಿ ಭೂಮಿ, ಬಹು ಬೆಳೆ ಭೂಮಿ ಸ್ವಾಧೀನ ಮಾಡುವಂತಿಲ್ಲ‌.
  • ಯೋಜನೆಗೆ ಬೇಕಾದಷ್ಟೇ ಭೂ ಸ್ವಾಧೀನ ಮಾಡಬೇಕು.
  • ಐದು ವರ್ಷದೊಳಗೆ ಭೂಮಿಯನ್ನು ಅದೇ ಉದ್ದೇಶಕ್ಕೆ ಬಳಸದಿದ್ದರೆ ರೈತರಿಗೆ ಭೂಮಿ ವಾಪಸ್​​.


ರಾಜ್ಯ ಸರ್ಕಾರದ ತಿದ್ದುಪಡಿ ಕಾಯ್ದೆಯಲ್ಲೇನಿದೆ?

  • ರಾಷ್ಟ್ರೀಯ ಭದ್ರತೆ, ಮೂಲ ಸೌಕರ್ಯ, ನೀರಾವರಿ, ಕುಡಿಯುವ ನೀರು, ಕೈಗಾರಿಕೆ, ವಸತಿ ಇತರ ಬೃಹತ್ ಯೋಜನೆಗಳಿಗೆ ಭೂ ಪರಿಹಾರ ಕಾಯ್ದೆ ಅನ್ವಯಿಸಲ್ಲ.
  • ಈ ವಿನಾಯಿತಿಯಿಂದ ರೈತರಿಗೆ ಭೂ ಪರಿಹಾರವಾಗಿ ಮಾರುಕಟ್ಟೆ ಬೆಲೆಯ ದುಪ್ಪಟ್ಟು ಪರಿಹಾರ ಸಿಗುವುದಿಲ್ಲ. ಮಾರ್ಗಸೂಚಿ ದರದಲ್ಲಿ ಪರಿಹಾರ ಸಿಗಲಿದೆ.
  • ಗೃಹ ಮಂಡಳಿ, ಹೆದ್ದಾರಿ, ಕೈಗಾರಿಕೆ, ವಸತಿ ಹಾಗೂ ನಿವೇಶನ ಯೋಜನೆಗಳಿಗಾಗಿ ರಾಜ್ಯದ ಆರು ವಿವಿಧ ಕಾಯ್ದೆಗಳಡಿ ಸ್ವಾಧೀನ ಪಡಿಸುವ ಭೂಮಿಗಳಿಗೆ ಕೇಂದ್ರದ ಭೂ ಸ್ವಾಧೀನ ಕಾಯ್ದೆ ಅನ್ವಯಿಸಲ್ಲ.
  • ಕೇಂದ್ರದ ಕಾಯ್ದೆಯಲ್ಲಿ ಪುನರ್ವಸತಿ, ಪುನರ್ವ್ಯವಸ್ಥೆ ಕಡ್ಡಾಯವಾಗಿದ್ದರೆ, ತಿದ್ದುಪಡಿ ಕಾಯ್ದೆಯಲ್ಲಿ ಅದರ ಬದಲಿಗೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ನಿರ್ಧರಿಸುವ ಇಡುಗಂಟು (ಇಂತಿಷ್ಟು ಮೊತ್ತ) ಪಾವತಿಸಬಹುದಾಗಿದೆ.
  • ಭೂಮಿಯನ್ನು ಐದು ವರ್ಷದೊಳಗೆ ಬಳಸದಿದ್ದರೆ ಭೂ ಮಾಲೀಕನಿಗೆ ವಾಪಾಸು ಕೊಡುವ ನಿಯಮಕ್ಕೆ ತಿದ್ದುಪಡಿ. ಯೋಜನೆ ಜಾರಿಗೆ ನಿರ್ದಿಷ್ಟಪಡಿಸಿದ ಅವಧಿ ಎಂದು‌ ಮಾರ್ಪಾಡು.
  • ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರ.
Last Updated : Jun 10, 2019, 7:46 PM IST

ABOUT THE AUTHOR

...view details