ಬೆಂಗಳೂರು:ಈ ಬಜೆಟ್ನಲ್ಲಿ ಬೆಂಗಳೂರು ನಗರಕ್ಕೆ ಸೀಮಿತವಾಗಿ ಪತ್ಯೇಕ ಪೌರ ನಿಗಮ ಕಾಯ್ದೆ ರಚನೆಯನ್ನ ಘೋಷಿಸಲಾಗಿದೆ. ಶುಭ್ರ ಬೆಂಗಳೂರು ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ 317 ಕೋಟಿ ರೂ. ಮೀಸಲಿಡಲಾಗಿದೆ.
ರಾಜಕಾಲುವೆಗಳ ಅಭಿವೃದ್ಧಿಗೆ 200 ಕೋಟಿ ರೂ. ನಿಗದಿ ಮಾಡಲಾಗಿದೆ. ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಲು 200 ಕೋಟಿ ರೂ. ಮೀಸಲಿಡಲಾಗಿದೆ. 110 ಹಳ್ಳಿಗಳಿಗೆ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಒಳಚರಂಡಿ ಅಭಿವೃದ್ಧಿಗೆ ಮುಂದಿನ ಎರಡು ವರ್ಷದಲ್ಲಿ1,000 ಕೋಟಿ ರೂ. ನೀಡಲಾಗಿದೆ. ಈ ಸಾಲಿನಲ್ಲಿ 500 ಕೋಟಿ ರೂ. ಅನುದಾನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಅಡಿ ಮಹಿಳಾ ವಿಶ್ರಾಂತಿ ಕೊಠಡಿ ಸ್ಥಾಪನೆ. ಆನಂದ್ ರಾವ್ ವೃತ್ತದ ಬಳಿ 400 ಕೋಟಿ ರೂ. ವೆಚ್ಚದಲ್ಲಿ 25 ಅಂತಸ್ತಿನ ಅವಳಿ ಗೋಪುರಗಳನ್ನ ಸ್ಥಾಪಿಸಿ ಎಲ್ಲ ಸರ್ಕಾರಿ ಕಚೇರಿಗಳು ಈ ಅವಳಿ ಗೋಪುರಗಳಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
ಬೆಂಗಳೂರಿನಲ್ಲಿ ಯುವ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ ಅನುದಾನ ನೀಡಲಾಗಿದೆ. ಬೆಂಗಳೂರಿನ ಕೆಸಿ ಜನರಲ್ ಮತ್ತು 5 ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ 5 ಕೋಟಿ ಬಿಡುಗಡೆ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಂಡರ್ ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ. ಬೆಂಗಳೂರಿನಲ್ಲಿ ಅತೀ ವೇಗದ ಇಂಟರ್ ನೆಟ್ ಸಂಪರ್ಕ. ಇದಕ್ಕಾಗಿ ಆಪ್ಟಿಕಲ್ ಫೈಬರ್ ಕೇಬಲ್ಗಳ ಅಳವಡಿಕೆಗೆ ಯೋಜಿಸಲಾಗಿದೆ. ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಕಲಾಕ್ಷೇತ್ರಗಳ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.
ಮೀಸಲು ಉಪನಗರ ರೈಲು ಯೋಜನೆ:ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ₹ 18,000 ಕೋಟಿ ಮಂಜೂರು ಮಾಡಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ₹ 500 ಕೋಟಿ ಅನುದಾನ ಮೀಸಲಿಡಲಿದೆ.