ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗೊಂದಲಕ್ಕೆ ಸಿಲುಕಿದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತಿದೆ.
ಕಾರಣ, ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ನಂತರ ಜೆಡಿಎಸ್ನಲ್ಲಿ ಹಲವಾರು ಬದಲಾವಣೆಗಳಾದವು. ಹಲವರು ಪಕ್ಷ ತೊರೆದರು. ಈಗಲೂ ಸಹ ಪಕ್ಷ ಬಿಡುವ ಕಾರ್ಯದಲ್ಲಿ ಕೆಲವು ನಾಯಕರು ನಿರತರಾಗಿದ್ದಾರೆ. ಮಧು ಬಂಗಾರಪ್ಪ ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದು, ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ.
ಮೈಸೂರು ಭಾಗದ ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ ಪಕ್ಷ ತೊರೆಯುವ ಹೊಸ್ತಿಲಲ್ಲಿ ಇದ್ದಾರೆ. ಇನ್ನು ಉಳಿದ ಶಾಸಕರಲ್ಲೂ ಗೊಂದಲವಿದೆ. ಹಲವು ರಾಜಕೀಯ ವಿದ್ಯಮಾನಗಳು ನಡೆದಿವೆ. ಮತ್ತು ನಡೆಯುತ್ತಿವೆ. ಹಾಗಾಗಿ, ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಕುಮಾರಸ್ವಾಮಿ ಸಹ ಸ್ಪಷ್ಟ ನಿಲುವು ತಾಳಲಾಗದೆ ಗೊಂದಲಕ್ಕೆ ಒಳಗಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಬಿಜೆಪಿ ಜೊತೆ ಹೋಗಬೇಕೋ, ಕಾಂಗ್ರೆಸ್ ಜೊತೆ ಕೈಜೋಡಿಸಬೇಕೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇನ್ನು ಹೇಳಿ ಕೇಳಿ ಪಕ್ಷದ ಹೆಸರೇ ಜಾತ್ಯಾತೀತ ಜನತಾ ದಳ. ಹೀಗಿರುವಾಗ ಬಿಜೆಪಿಗೆ ಹೋದರೆ ಕೋಮುವಾದಿ ಹಣೆಪಟ್ಟಿ ಅಪವಾದ ಹೊರಬೇಕಾಗಬಹುದೆಂಬ ಆತಂಕ. ಅಷ್ಟೇ ಅಲ್ಲ ಮುಸ್ಲಿಂ ಮತ್ತು ಜಾತ್ಯಾತೀತ ಮತಗಳು ಕೈತಪ್ಪಬಹುದೆಂಬ ಗೊಂದಲ ಬೇರೆ. ದೇಶದ ಪ್ರಮುಖ ಜಾತ್ಯಾತೀತ ನಾಯಕರ ಸಮ್ಮುಖದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಹೆಚ್‌ಡಿಕೆಗೆ, ಬಿಜೆಪಿ ಜೊತೆ ಹೋದರೆ ಪಕ್ಷ ಹಾಗೂ ವರ್ಚಸ್ಸಿಗೆ ಹೊಡೆತ ಬೀಳಬಹುದೆಂಬ ಆತಂಕ ಎದುರಾಗಿದೆ.
ಇನ್ನು ಕಾಂಗ್ರೆಸ್ ಜೊತೆ ಕೈಜೋಡಿಸಿದರೆ ಪಕ್ಷವನ್ನೇ ಮುಗಿಸಬಹುದೆಂಬ ಭಯ ಕಾಡುತ್ತಿದೆ. ಹಲವು ಸಂದರ್ಭಗಳಲ್ಲಿ ಪಕ್ಷವನ್ನೇ ಒಡೆಯಲು ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸಿದ್ದರು ಎಂಬ ಆಕ್ರೋಶ ಕುಮಾರಸ್ವಾಮಿ ಅವರಿಗೆ ಇದೆ. ಇದನ್ನು ಬಹಿರಂಗವಾಗಿಯೇ ಹೇಳಿದ್ದರು. ಅಷ್ಟಕ್ಕೂ ಕಳೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್ಗೆ ಮುಸ್ಲಿಂ ಮತಗಳು ಲಭಿಸಲಿಲ್ಲ ಎಂಬುದನ್ನು ಜೆಡಿಎಸ್ ನಾಯಕರೇ ಒಪ್ಪಿಕೊಳ್ಳುತ್ತಾರೆ.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ನಾಯಕರು ತಮ್ಮ ಪರ ಒಲವು ಹೊಂದಿದ್ದಾರೆಂಬ ನಂಬಿಕೆ ಹೆಚ್ಡಿಕೆ ಅವರದ್ದು. ಸರ್ಕಾರ ಬೀಳಿಸಲು ಬಿಜೆಪಿ ಕಾರಣ ಎಂಬುದು ಗೊತ್ತಿದ್ದರೂ, ಎಲ್ಲೋ ಒಂದು ಕಡೆ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹಾಗೂ ಯಡಿಯೂರಪ್ಪ ಅವರ ಬಗ್ಗೆ ಸಾಫ್ಟ್ ಕಾರ್ನರ್ ಇದ್ದಂತೆ ಕಾಣುತ್ತದೆ. ಇತ್ತೀಚೆಗೆ ನಡೆದ ವಿಧಾನಪರಿಷತ್ ಸಭಾಪತಿ ಆಯ್ಕೆ ವಿಚಾರದಲ್ಲಿ ಜೆಡಿಎಸ್ ನಡೆ ಏನೆಂಬುದು ಇದಕ್ಕೆ ಪುಷ್ಠಿ ನೀಡಿದೆ.