ಬೆಂಗಳೂರು : ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆ ಉತ್ತಮಗೊಳಿಸಲು ಹಾಗೂ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ ಈ ಸಂಬಂಧ ನಗರದಲ್ಲಿ ಐದು ಟ್ರಾಫಿಕ್ ಹಾಗೂ ಆರು ಮಹಿಳಾ ಠಾಣೆಗಳನ್ನು ತೆರೆಯಲು ನಿರ್ಧರಿಸಿದೆ.
ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಇಲಾಖೆಯಲ್ಲಿ ಹಲವು ರೀತಿಯ ಸುಧಾರಣಾ ಕ್ರಮ ಕೈಗೊಂಡರೂ ನಿರೀಕ್ಷೆಯಂತೆ ಟ್ರಾಫಿಕ್ ಕಡಿಮೆಯಾಗಿಲ್ಲ. ಅಲ್ಲದೆ, ಸಿಬ್ಬಂದಿ ಕೊರತೆಯಿಂದ ಟ್ರಾಫಿಕ್ ಸುಧಾರಣೆಗೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ರಾಜಧಾನಿಯಲ್ಲಿರುವ 111 ಸಂಚಾರ ಪೊಲೀಸ್ ಠಾಣೆಗಳ ಜೊತೆ ಮತ್ತೆ ಐದು ಠಾಣೆಗಳು ನಿರ್ಮಾಣವಾಗಲಿದೆ.
ನಗರದಲ್ಲಿ ಈಗಾಗಲೇ ಎರಡು ಮಹಿಳಾ ಠಾಣೆಗಳಿವೆ. ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ 6 ಮಹಿಳಾ ಠಾಣೆಗಳ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, 2454 ಹೊಸ ಹುದ್ದೆ ಸೃಷ್ಟಿಸುವುದಾಗಿ ಭರವಸೆ ನೀಡಿದೆ. ಪೊಲೀಸ್ ಗೃಹ 2025 ಯೋಜನೆಯಡಿ ಪ್ರಸಕ್ತ ವರ್ಷ 2,125 ವಸತಿಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಈ ವರ್ಷ 450 ಕೋಟಿ ಮೀಸಲಿರಿಸಲಾಗಿದೆ. ಪೊಲೀಸ್ ಮೊಬಿಲಿಟಿ ಯೋಜನೆಯಡಿ ಇಲಾಖೆಯಲ್ಲಿನ ಹಳೆಯ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಲು ಬಜೆಟ್ನಲ್ಲಿ 100 ಕೋಟಿ ಅನುದಾನ ನೀಡಿದೆ.
ಹಾಗೆಯೇ, ಪೊಲೀಸ್ ಇಲಾಖೆಯಲ್ಲಿನ ಮೂಲಭೂತ ಸೌಕರ್ಯಗಳ ಉನ್ನತಿಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಠಾಣೆ ಮತ್ತು ಕಚೇರಿ ಕಟ್ಟಡಗಳು, ಎಂ.ಟಿ. ಶೆಡ್, ಶಸ್ತ್ರಾಗಾರ ಮುಂತಾದ ಕಟ್ಟಡಗಳ ನಿರ್ಮಾಣ ಕಾರ್ಯಕ್ಕಾಗಿ 10 ಕೋಟಿ ಒದಗಿಸಿದೆ. ರಾಜ್ಯ ಅಪರಾಧ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಪರಾಧ ತನಿಖಾ ವಿಭಾಗ (CID), ಸೈಬರ್ ಅಪರಾಧ ಘಟಕ (CCD) ಮತ್ತು ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗಳ ಘಟಕಗಳನ್ನು 10 ಕೋಟಿ ಉನ್ನತೀಕರಣಕ್ಕೆ ಕ್ರಮಕೈಗೊಂಡಿದೆ.
ಪೊಲೀಸ್ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ತರಬೇತಿ ಶಾಲೆಗಳನ್ನು 20 ಕೋಟಿ ರೂ. ಗಳ ವೆಚ್ಚದಲ್ಲಿ ಬಲವರ್ಧನೆಗೆ ಕ್ರಮ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಲು ಪೊಲೀಸ್ ಇಲಾಖೆಗೆ ಡ್ರೋನ್ ಕ್ಯಾಮರಾ, ಕಣ್ಗಾವಲು ಕ್ಯಾಮರಾ ಹಾಗೂ ಬಾಡಿವೋರ್ನ್ ಕ್ಯಾಮರಾ ನೀಡಲು ಮುಂದಾಗಿದೆ.