ಬೆಂಗಳೂರು: ಕೋವಿಡ್ 19 ನಿಯಂತ್ರಿಸಲು ಇದೀಗ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಹೊರತಾದ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಸಿಎಂ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ತುರ್ತು ಸಭೆಯ ಇನ್ಸೈಡ್ ಡಿಟೇಲ್ಸ್ ಇಲ್ಲಿದೆ.
ಜುಲೈ 5ರ ಬಳಿಕ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಸಭೆಯಲ್ಲಿ ಸಿಎಂ ಭಾನುವಾರದ ಜೊತೆ ಶನಿವಾರ ಕೂಡಾ ಲಾಕ್‌ಡೌನ್ ಮಾಡುವ ಬಗ್ಗೆ ಒಲವು ತೋರಿದ್ದರು ಎನ್ನಲಾಗಿದೆ. ಆದರೆ, ತಕ್ಷಣಕ್ಕೆ ವಾರದಲ್ಲಿ ಎರಡು ದಿನ ಲಾಕ್‌ಡೌನ್ ಬೇಡ, ಒಂದೆರಡು ಸಂಡೇ ಲಾಕ್‌ಡೌನ್ ಮಾಡೋಣ. ಸೋಂಕು ಪ್ರಮಾಣ ನಿಯಂತ್ರಣಕ್ಕೆ ಬರದಿದ್ದರೆ ನಂತರ ಶನಿವಾರ ಮತ್ತು ಭಾನುವಾರ ಎರಡು ದಿನ ಮಾಡುವುದು ಒಳಿತು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಆಗಲೂ ನಿಯಂತ್ರಣ ಸಾಧ್ಯವಾಗದಿದ್ದಲ್ಲಿ ಮತ್ತೆ ರ್ಯಾಂಡಮ್ ಟೆಸ್ಟ್ ಮಾಡೋಣ. ವೈದ್ಯಕೀಯ ಸೌಲಭ್ಯ ಹೆಚ್ಚು ಮಾಡುವತ್ತ ಗಮನ ಹರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ಹೀಗಾಗಿ ಸದ್ಯ ಭಾನುವಾರ ಮಾತ್ರ ಲಾಕ್‌ಡೌನ್ ಮಾಡುವ ಬಗ್ಗೆ ಸಿಎಂ ಒಪ್ಪಿಗೆ ಸೂಚಿಸಿದರು.
ಇನ್ನು ಜುಲೈ 10ರಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ 2ನೇ ಹಾಗೂ 4ನೇ ಶನಿವಾರದ ಜೊತೆಗೆ ಉಳಿದ ಶನಿವಾರದಂದು ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಎಲ್ಲಾ ಕಚೇರಿಗಳಿಗೆ ರಜೆ ಘೋಷಿಸಲು ತೀರ್ಮಾನಿಸಲಾಯಿತು. ಪ್ರತಿ ದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಈಗಾಗಲೇ ಇರುವ ಕರ್ಫ್ಯೂ ಅವಧಿಯ ಬದಲಾಗಿ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಅವಧಿಯನ್ನು ಬದಲಾಯಿಸಲು ತೀರ್ಮಾನಿಸಲಾಯಿತು.
ಹೆಚ್ಚಿನ ಸಗಟು ಮಾರುಕಟ್ಟೆ ತೆರಯಲು ಸೂಚನೆ:
ಬೆಂಗಳೂರಿನಲ್ಲಿರುವ ಬೃಹತ್ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳಲ್ಲಿ ಆಗುವ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಹೆಚ್ಚಿನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳನ್ನು ತೆರೆಯಲು ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚಿಸಿದರು.
ಅಂಬ್ಯುಲೆನ್ಸ್ ಸಂಖ್ಯೆ ಹೆಚ್ಚಿಸಲು ಸೂಚನೆ:
ಕೋವಿಡ್-19 ಸೋಂಕಿತ ರೋಗಿಗಳನ್ನು ಶೀಘ್ರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲು (ಸೆಂಟ್ರಲೈಜ್ ಬೆಡ್ ಅಲೋಕೇಷನ್ ಸಿಸ್ಟಮ್) ತಂತ್ರಾಂಶದ ಮೂಲಕ ಜಾರಿಗೊಳಿಸಲು ಕ್ರಮ ವಹಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಸಂಖ್ಯೆಗಳನ್ನು 250ಕ್ಕೆ ಹೆಚ್ಚಿಸಲು ಮತ್ತು ಕೋವಿಡ್‍ನಿಂದ ಮೃತರಾದ ದೇಹಗಳನ್ನು ಸಾಗಿಸಲು ಪ್ರತ್ಯೇಕ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು. ಅಂಬ್ಯುಲೆನ್ಸ್ ಇರುವ ಸ್ಥಳವನ್ನು ಗುರ್ತಿಸಲು ಮತ್ತು ಅವುಗಳ ಸರಳ ಚಲನವಲನಗಳ ಸಲುವಾಗಿ ಪೊಲೀಸ್ ಕಂಟ್ರೋಲ್ ರೂಂ ವೈರ್‌ಲೆಸ್ ಸೇವೆಯನ್ನು ಬಳಸಿಕೊಳ್ಳಲು ಸೂಚನೆ ನೀಡಿದರು.