ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿ ಸೇರಿ ಎಲ್ಲರೂ ಭ್ರಷ್ಟರು, ಕಮಿಷನ್ ಬಗ್ಗೆ ಮೋದಿಗೆ ಮತ್ತೊಮ್ಮೆ ಪತ್ರ: ಕೆಂಪಣ್ಣ

ಸಿದ್ದರಾಮಯ್ಯ ಭೇಟಿಯ ವೇಳೆ ನಾವು ಯಾವ ಸಚಿವರ ಹೆಸರೂ ಹೇಳಿಲ್ಲ. ಯಾವ ಮಾಹಿತಿಯೂ ಕೊಟ್ಟಿಲ್ಲ. ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ದಾಖಲೆ ಕೊಡುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದರು.

we-will-write-to-pm-modi-on-commission-issue-says-kempanna
ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಭ್ರಷ್ಟರು, ಕಮಿಷನ್ ಬಗ್ಗೆ ಮೋದಿಗೆ ಮತ್ತೊಮ್ಮೆ ಪತ್ರ: ಕೆಂಪಣ್ಣ

By

Published : Aug 24, 2022, 3:25 PM IST

Updated : Aug 24, 2022, 3:40 PM IST

ಬೆಂಗಳೂರು: ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರು ಎಲ್ಲರೂ ಭ್ರಷ್ಟರಾಗಿದ್ದು ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರಿಗೆ 22 ಸಾವಿರ ಕೋಟಿ ರೂ. ಬಾಕಿ ಇದೆ. ಮುಂದಿನ 15 ದಿನದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರ ಗುತ್ತಿಗೆದಾರರಿಂದ ಕಮಿಷನ್​ಗೆ ಬೇಡಿಕೆ ಇಡುತ್ತಿರುವ ಕುರಿತು ಪತ್ರ ಬರೆಯುತ್ತೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.

ಕೆಂಪಣ್ಣ ನೇತೃತ್ವದ ನಿಯೋಗ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ನಗರದ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ ಅಧಿಕೃತ ನಿವಾಸಕ್ಕೆ ಆಗಮಿಸಿದ ಈ ನಿಯೋಗವು ಸರ್ಕಾರದಿಂದ ಗುತ್ತಿಗೆದಾರರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ಅಲ್ಲದೇ, ತಮ್ಮ ಹೋರಾಟಕ್ಕೆ ಸಹಕಾರ ನೀಡುವಂತೆಯೂ ಸದಸ್ಯರು ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ, ಕಮಿಷನ್​ ವಿಚಾರವಾಗಿ ಸಿದ್ದರಾಮಯ್ಯ ಸದನದಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ. ಎಲ್ಓಸಿಗೆ ಒಂದು ರೂಪಾಯಿ ಕಲೆಕ್ಟ್ ಮಾಡಲ್ಲ ಅಂತ ಹೇಳಿದ್ದಾರೆ. ದಾಖಲೆ ಯಾರಿಗೆ ಕೊಟ್ಟರು, ಯಾರು ಕೊಟ್ಟರು ಅಂತ ಗೊತ್ತಾಗುತ್ತದೆ. ಹಾಗಾಗಿ ನಮ್ಮ ಗುತ್ತಿಗೆದಾರರಿಗೆ ಭಯ ಇದೆ. ಸಮಯ ಬಂದಾಗ ಮತ್ತಷ್ಟು ಮಾಹಿತಿ ಕೊಡುತ್ತೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಭೇಟಿ ಸಂದರ್ಭದಲ್ಲಿ ಯಾವ ಸಚಿವರ ಹೆಸರೂ ಹೇಳಿಲ್ಲ. ಯಾವ ಮಾಹಿತಿಯೂ ಕೊಟ್ಟಿಲ್ಲ. ನ್ಯಾಯಾಂಗ ತನಿಖೆ ಮಾಡಿ ಸಾಬೀತು ಮಾಡದೇ ಇದ್ದರೆ ಏನು ಬೇಕಾದರೂ ಶಿಕ್ಷೆ ಕೊಡಿ. ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ನಾವು ದಾಖಲೆ ಕೊಡುತ್ತೇವೆ ಎಂದರು.

ಅಧಿಕಾರಿಗಳು ಸಿಎಂ ಮಾತು ಕೇಳದ ಪರಿಸ್ಥಿತಿ: ನಮ್ಮ‌ ಹೋರಾಟ ಮುಂದುವರಿಯಲಿದೆ. ಅಧಿಕಾರಿಗಳು ಸಿಎಂ ಮಾತನ್ನು ಕೇಳದ ಸ್ಥಿತಿಯಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಬದಲಾಯಿಸಲು ಸಿಎಂ ಹೇಳಿದ್ದರು. ಆದರೆ ಸಿಎಂ ಮಾತೇ ಕೇಳುತ್ತಿಲ್ಲ. ತನಿಖೆ ಮಾಡಿದಾಗ ದಾಖಲೆ ಕೊಡುತ್ತೇವೆ. ನ್ಯಾಯಾಂಗ ತನಿಖೆ ಮಾಡಲಿ, ನಾನು ದಾಖಲೆ ಕೊಟ್ಟರೆ ಗುತ್ತಿಗೆದಾರರಿಗೆ ತೊಂದರೆ ಕೊಡುತ್ತಾರೆ. 15 ದಿನಗಳಲ್ಲಿ ಮತ್ತೆ ಪ್ರಧಾನಿಗೆ ಪತ್ರ ಬರೆಯುತ್ತೇವೆ ಎಂದು ಅವರು ಹೇಳಿದರು.

ಸಿಎಂ ಸೇರಿ ಎಲ್ಲರೂ ಭ್ರಷ್ಟರು:ಎಲ್ಲ ಶಾಸಕರು ಶೇ.10ರಿಂದ 15ರಷ್ಟು ಕಮಿಷನ್ ಕೇಳುತ್ತಾರೆ. ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ. ಒಬ್ಬರಿಗೆ ಅಂತ ರ‍್ಯಾಂಕಿಂಗ್ ಕೊಡಲು ಆಗುವುದಿಲ್ಲ. ಎಲ್ಲ ಮಿನಿಸ್ಟರ್​ಗಳೂ, ಎಂಎಲ್ಎಗಳೂ ನಂಬರ್ 1 ಸ್ಥಾನದಲ್ಲಿ ಇದ್ದಾರೆ. ಬೊಮ್ಮಾಯಿ ಸೇರಿ ಎಲ್ಲರೂ ಕರಪ್ಟ್ ಆಗಿದ್ದಾರೆ. ಕೆಲವು ಕಡೆ ಶೇ.100ರಷ್ಟು ಕರಪ್ಶನ್ ಇದೆ. ಕೆಲವು ಕಡೆ ಒಂದು ಪೈಸೆ ಕೆಲಸ ಮಾಡದೇ ಶೇ.100ರಷ್ಟೂ ತಿಂದಿದ್ದಾರೆ ಎಂದು ಕೆಂಪಣ್ಣ ದೂರಿದರು.

ಮುನಿರತ್ನ ವಿರುದ್ಧ ಆರೋಪ:ಮೊದಲು ಶೇ.40ರಷ್ಟು ಕಮಿಷನ್ ಇತ್ತು. ಈಗ ಕೆಲವು ಹಂತಗಳಲ್ಲಿ ಬದಲಾವಣೆ ಆಗಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಕಲೆಕ್ಷನ್ ಮಾಡಿ‌ಕೊಡಲು ಹೇಳಿದ್ದಾರೆ. ನಮಗೆ ಈಗ ಬಂದಿರುವ ವರದಿ ಪ್ರಕಾರ ಕಮಿಷನ್ ಕೇಳಿದ್ದಾರೆ. ಪರೋಕ್ಷವಾಗಿ ಸಚಿವರಿಂದ ಬೆದರಿಕೆ ಇದೆ. ಉಸ್ತುವಾರಿ ಸಚಿವರೇ ಹಣ ಸಂಗ್ರಹ ಮಾಡುತ್ತಿದ್ದಾರೆ. ಮೂರು ವರ್ಷದಿಂದ ಬಾಕಿ ಪಾವತಿಯಾಗಿಲ್ಲ. ಆರ್​ಆರ್ ನಗರದಲ್ಲಿ 10 ಸಾವಿರ ಕೋಟಿ ಕೆಲಸ ಮಾಡಿಸಿದ್ದಾರೆ. ಆದರೆ, ಏನು ಅಭಿವೃದ್ಧಿ ಆಗಿದೆ ಎಂದು ಪ್ರಶ್ನಿಸಿದರು.

ಗುತ್ತಿಗೆದಾರರ ಸಂಘಟನೆ ಒಡೆಯುವ ಪ್ರಯತ್ನ:ಕೆಲವು ಸಚಿವರು ನಮ್ಮ ಸಂಘಟನೆಯನ್ನೇ ಒಡೆಯುತ್ತಿದ್ದಾರೆ. ಲೋಕೋಪಯೋಗಿ ಸಚಿವರು ಕರ್ನಾಟಕ ಒಡೆಯುವವರಿಗೆ ಬೆಂಬಲ ಕೊಡುತ್ತಿದ್ದಾರೆ. ಸರ್ಕಾರಿ ಆದೇಶ ಆಗಿರುವುದನ್ನು ಜಾರಿಗೆ ತರುತ್ತಿಲ್ಲ. ಸಿಎಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸರ್ಕಾರಿ ಆದೇಶವನ್ನು ಕೋರ್ಟ್​ಗೆ ಹೋಗಿ ಜಾರಿಗೆ ತರಬೇಕು ಅಂದರೆ ಅವರಿಗೆ ಏನು ಕಿಮ್ಮತ್ತಿದೆ?. ಮೋಸ್ಟ್ ಕರಪ್ಟ್ ಗೌರ್ಮೆಂಟ್, ಇಂಥ ಸರ್ಕಾರವನ್ನು ನನ್ನ ಲೈಫಲ್ಲಿ ನೋಡಿರೋದು ಇದೇ ಮೊದಲು ಎಂದು ಕಿಡಿಕಾರಿದರು.

ಇದನ್ನೂ ಓದಿ:40​ ಅಲ್ಲ, ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮಿಷನ್.. ತುಷಾರ್‌ ಗಿರಿನಾಥ್‌ಗೆ ಗುತ್ತಿಗೆದಾರರ ಸಂಘದಿಂದ ದೂರು

Last Updated : Aug 24, 2022, 3:40 PM IST

ABOUT THE AUTHOR

...view details