ಬೆಂಗಳೂರು:ವಿಜಯೇಂದ್ರ ಹಾಗೂ ನನಗಿಬ್ಬರಿಗೂ ಹೊಸ ಜವಾಬ್ದಾರಿ ಸಿಕ್ಕಿದೆ. ವರಿಷ್ಠರು ಲೋಕಸಭಾ ಕ್ಷೇತ್ರದಲ್ಲಿ ಎಲ್ಲ 28 ಕ್ಷೇತ್ರಗಳು ಎನ್.ಡಿ.ಎ ಮೈತ್ರಿಕೂಟದ ಪಾಲಾಗಬೇಕು ಹಾಗೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕು ಎನ್ನುವ ಟಾಸ್ಕ್ ನೀಡಿದ್ದಾರೆ. ನಾವಿಬ್ಬರೂ ಯಾವುದೇ ವಿವಾದಗಳಿಲ್ಲದೇ, ಜೋಡೆತ್ತುಗಳಂತೆ ಕೆಲಸ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್, ನಾನು ಹಾಗೂ ವಿಜಯೇಂದ್ರ ಇಬ್ಬರೂ ಕೂಡ ಪಕ್ಷದ ಸಂಘಟನೆಯಿಂದ ಬೆಳೆದವರು. ನಾವು ಪ್ರಾರಂಭದಿಂದಲೂ ಪರಿವಾರದ ಸಂಘಟನೆಗಳಲ್ಲಿ ಕೆಲಸ ಮಾಡಿದವರು. ರಾಜ್ಯದಲ್ಲಿ ಯಾವ ರೀತಿ ಯಡಿಯೂರಪ್ಪ ರೈತನ ನಾಯಕರಾಗಿ ಇಡೀ ರಾಜ್ಯವನ್ನು ಸುತ್ತುತ್ತಿದ್ದರೋ ಹಾಗೆಯೇ ನಾವಿಬ್ಬರೂ ರಾಜ್ಯಾದ್ಯಂತ ಸುತ್ತುವ ಮೂಲಕ ಬಿಜೆಪಿಯನ್ನು ಇನ್ನೂ ಶಕ್ತಿಶಾಲಿಯಾಗಿ ಬೆಳೆಸುವ ಕೆಲಸ ಮಾಡುತ್ತೇವೆ ಎಂದರು.
ನಾನು ಪ್ರತಿಪಕ್ಷದ ನಾಯಕ ಇರಬಹುದು, ಆದರೆ 66 ಶಾಸಕರೂ ನಾಯಕರೇ. ಜೊತೆಗೆ ಜೆಡಿಎಸ್ ಎನ್.ಡಿ.ಎ ಪಾಲುದಾರ ಪಕ್ಷವಾಗಿದೆ. ಜೆಡಿಎಸ್ನವರು 19 ಜನ ಇದ್ದಾರೆ. ಇದರಿಂದ ಒಟ್ಟಾರೆ ನಾವು 85 ಜನ ಆಗಲಿದ್ದೇವೆ. ಇದು ದೊಡ್ಡ ಸಂಖ್ಯೆ ಆಗಲಿದೆ. ಕಾಂಗ್ರೆಸ್ ಮಾಡುತ್ತಿರುವ ಅವ್ಯವಹಾರ, ಭ್ರಷ್ಟಾಚಾರ ಬಯಲಿಗೆಳೆಯಲು ಮತ್ತು ಜನರಿಗೆ ನ್ಯಾಯಯುವಾಗಿ ನೆರೆ, ಬರ ಹಾಗೂ ಬೇರೆ ಬೇರೆ ಪರಿಹಾರಗಳು ಸಿಗುವಂತೆ ಮಾಡುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.