ಬೆಂಗಳೂರು:2024ಕ್ಕೆ ಲೋಕಸಭಾ ಚುನಾವಣೆ ಇದೆ, ಕರ್ನಾಟಕದಲ್ಲಿ 2023ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇವುಗಳ ಜೊತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ, ಮಹಾನಗರ ಪಾಲಿಕೆ ಚುನಾವಣೆ ಬರುತ್ತಿದೆ. ಈ ಹಿನ್ನೆಲೆ ಗುರುವಾರ ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಂಕಲ್ಪ ಚಿಂತನಾ ಶಿಬಿರ: ಬೆಂಗಳೂರು ಹೊರವಲಯದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಪಕ್ಷದ ಎರಡು ದಿನಗಳ ಸಂಕಲ್ಪ ಚಿಂತನಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷ ಬೂತ್ ಮಟ್ಟದಿಂದ ಕೆಪಿಸಿಸಿ ಮಟ್ಟದವರೆಗೆ ಸಂಘಟಿತಗೊಂಡರೆ ಚುನಾವಣೆಗಳ ಗೆಲುವು ಕಷ್ಟದ ಕೆಲಸವಲ್ಲ. ಇಂತಹ ಹಲವು ಚುನಾವಣೆಗಳನ್ನು ಯಶಸ್ವಿಯಾಗಿ ಪಕ್ಷ ಈಗಾಗಲೇ ಎದುರಿಸಿದೆ. ಪಕ್ಷವನ್ನು ಬಲಪಡಿಸಲು ಅನೇಕ ಕ್ರಮಗಳನ್ನು ಎಐಸಿಸಿ ಹಾಗೂ ಕೆಪಿಸಿಸಿ ತೆಗೆದುಕೊಳ್ಳಲು ಆರಂಭ ಮಾಡಿದೆ. ಅದರ ಭಾಗವಾಗಿ ಈ ಸಭೆಯೂ ನಡೆಯುತ್ತಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು ಎಂಬ ಆದೇಶವಾಗಿದೆ.
ಭಕ್ತವತ್ಸಲಂ ಸಮಿತಿ ರಚನೆ:ಸುಪ್ರೀಂಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರದ ಮೀಸಲಾತಿ ಬಗ್ಗೆ ಒಂದು ತೀರ್ಪು ನೀಡಿದೆ. ತೀರ್ಪಿನ ಪ್ರಕಾರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವಾಗ ಒಂದು ನಂಬಿಕಾರ್ಹ ಮಾಹಿತಿ ಇರಬೇಕು ಮತ್ತು ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು ಹೇಳಿದೆ. ಇದು 2021 ಏಪ್ರಿಲ್ನಲ್ಲಿ ನೀಡಿದ ತೀರ್ಪಾಗಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಈ ತೀರ್ಪು ಬಂದ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಭಕ್ತವತ್ಸಲಂ ಅವರ ಸಮಿತಿ ರಚನೆ ಮಾಡಿದೆ. ಆ ಸಮಿತಿ ಇನ್ನು ವರದಿ ನೀಡಿಲ್ಲ. ಹತ್ತು ವಾರದಲ್ಲಿ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ.
ನಮ್ಮ ಪಕ್ಷವು ಸರ್ವ ಪಕ್ಷ ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಇಲ್ಲದೇ ಚುನಾವಣೆ ನಡೆಸಬಾರದು ಎಂದು ಹೇಳಿದೆ. ಹಿಂದುಳಿದ ಜಾತಿಗಳಿಗೆ, ಮಹಿಳೆಯರಿಗೆ ಮೀಸಲಾತಿ ನೀಡಿದ್ದು, ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿದ ನಂತರ. ಮಹಿಳೆಯರಿಗೆ ಶೇ50ರಷ್ಟು, ಹಿಂದುಳಿದ ಜಾತಿಗಳಿಗೆ ಶೇ 33ರಷ್ಟು ಮೀಸಲಾತಿ ನೀಡಲಾಯಿತು. ಇದರಲ್ಲಿ ಅಲ್ಪಸಂಖ್ಯಾತರು ಹಾಗೂ ಇನ್ನಿತರ ಜಾತಿಗಳು ಸೇರುತ್ತವೆ. ಕಾಂಗ್ರೆಸ್ ಪಕ್ಷ ರಾಜಕೀಯ ಮೀಸಲಾತಿ ನೀಡಿದ್ದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಬಿಜೆಪಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ: ಈಗ ತರಾತುರಿಯಲ್ಲಿ ಸರ್ಕಾರ ಚುನಾವಣೆ ನಡೆಸಬಹುದು. ಯಾಕೆಂದರೆ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ನಮ್ಮ ಕಾರ್ಯಕರ್ತರು ತಯಾರಾಗಬೇಕು. ನನಗಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರಕ್ಕೆ ಈ ಚುನಾವಣೆಯನ್ನು ನಡೆಸಲಾಗಲೀ ಅಥವಾ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಲು ಒಲವಿಲ್ಲ. ಕಾಂಗ್ರೆಸ್ಗೆ ಮಾತ್ರ ಈ ಬದ್ಧತೆ ಇರುವುದು. ಬಿಜೆಪಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ.
ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ: 2023ರ ಏಪ್ರಿಲ್ - ಮೇ ಗೆ ವಿಧಾನಸಭಾ ಚುನಾವಣೆ ಬರುತ್ತದೆ. ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇದು ನಮ್ಮ ಮುಂದಿರುವ ಸವಾಲು. ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಚುನಾವಣೆ ಗೆಲ್ಲುವುದಲ್ಲ, ರಾಜ್ಯ ಮತ್ತು ಇಲ್ಲಿನ ಜನ ಉಳಿಯಬೇಕು ಎಂಬ ಕಾರಣಕ್ಕೆ ನಾವು ಗೆಲ್ಲಬೇಕಾಗಿದೆ. ಆದ್ದರಿಂದ ನಾವು ಈ ಸವಾಲನ್ನು ಸ್ವೀಕಾರ ಮಾಡಬೇಕು. ಇವರು ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ನಮ್ಮ ಪಕ್ಷ 6 ಕಮಿಟಿಗಳನ್ನು ಮಾಡಿದೆ, ಇವುಗಳು ಸುದೀರ್ಘ ಚರ್ಚೆ ನಡೆಸಿ ತನ್ನ ನಿರ್ಣಯಗಳನ್ನು ಮಾಡಿ, ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದರು.