ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನಲ್ಲಿ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದುವರಿಯಲಿದ್ದು, ಇಂದೇ ತೀರ್ಪು ಹೊರಬೀಳುವ ಸಾಧ್ಯತೆಯಿದೆ.
ಅತೃಪ್ತ ಶಾಸಕರ ಅರ್ಜಿ ಕುರಿತು ಇಂದು ಸುಪ್ರೀಂ ತೀರ್ಪು: ಮೈತ್ರಿ ಸರ್ಕಾರದ ಭವಿಷ್ಯವೂ ನಿರ್ಧಾರ
ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಿಸಿ ಅತೃಪ್ತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ. ಹೀಗಾಗಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್ನತ್ತ ನೆಟ್ಟಿದೆ.
ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆದು ಹೊರಬೀಳುವ ತೀರ್ಪಿನ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ. ಈ ಹಿನ್ನೆಲೆ ಸುಪ್ರೀಂಕೋರ್ಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಅತೃಪ್ತ ಶಾಸಕರ ವಾದವಾಗಿದೆ. ಮತ್ತೊಂದೆಡೆ ಕಾನೂನು ಪ್ರಕಾರ ಪ್ರಕ್ರಿಯೆಗಳನ್ನು ಅನುಸರಿಸಿ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶದ ಅಗತ್ಯತೆ ಇದೆ ಎನ್ನುವುದು ಸ್ಪೀಕರ್ ಅವರ ಪ್ರತಿವಾದ ಆಗಿದೆ. ಅತೃಪ್ತರ ಬಗ್ಗೆ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ಮುಕುಲ್ ಲೋಹಟಗಿ ವಾದ ಮಂಡಿಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ಸ್ಪೀಕರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದು, ಎರಡೂ ಗುಂಪಿನ ನಡುವೆ ಕಾನೂನು ಸಮರ ನಡೆಯಲಿದೆ.
ಸ್ಪೀಕರ್ ಮತ್ತು ಬಂಡಾಯ ಶಾಸಕರ ನಿಲುವಿನಿಂದ ರಾಜೀನಾಮೆ ಅಂಗೀಕಾರ ಪ್ರಹಸನ ತೀವ್ರ ಕುತೂಹಲ ಘಟ್ಟ ಪಡೆದಿದೆ. ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಆದೇಶಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹಾಗೆಯೇ ಸ್ಪೀಕರ್ ಗೆ ಕಾಲಾವಕಾಶ ನೀಡಿದರೆ ಸದ್ಯಕ್ಕೆ ಸರ್ಕಾರ ಅಪಾಯದಿಂದ ಪಾರಾಗಲಿದೆ. ಆಡಳಿತ ಪಕ್ಷಗಳು ಹಾಗು ಪ್ರತಿಪಕ್ಷಗಳ ನಾಯಕರು ವಿಧಾನಮಂಡಲ ಅಧಿವೇಶನ ಆರಂಭವಾಗುವ ಇಂದು ಕೋರ್ಟ್ನಲ್ಲಿ ನಡೆಯುವ ವಿಚಾರಣೆಯನ್ನು ರಾಜಕೀಯ ತಂತ್ರಗಾರಿಕೆ ರೂಪಿಸಲು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.