ಬೆಂಗಳೂರು:ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರನ್ನು ಸ್ಥಳ ನಿಯುಕ್ತಿಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದ್ದು, ಈ ಪ್ರಕರಣದಲ್ಲಿ ಸರ್ಕಾರ ಬಿಗಿಯಾದ ಕ್ರಮ ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್, ರಾಜ್ಯದ ಹಿರಿಯ ಅಧಿಕಾರಿಗಳಾದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬೀದಿ ಜಗಳ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಧಾರಾವಾಹಿಯಾಗಿ ಮೂರು ದಿನಗಳಿಂದ ಪ್ರಾರಂಭವಾಗಿದೆ. ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ. ಮಹೇಶ್ ನಡುವಿನ ಆರೋಪಗಳ ಬಗ್ಗೆ ಸಂಧಾನವನ್ನು ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಿದ ಐಎಎಸ್ ಅಧಿಕಾರಿ ಪಿ ಮಣಿವಣ್ಣನ್ ಅವರಿಗೆ ಸರ್ಕಾರ ಅಧಿಕಾರ ಕೊಟ್ಟಿದೆಯಾ? ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ಮಾಡಿರುವ ಆರೋಪಗಳು ಇನ್ನೂ ಮುಕ್ತಾಯವಾಗದೇ ಇರುವ ಸಂದರ್ಭದಲ್ಲಿ ಸಂಧಾನ ನಡೆಸಲು ಪ್ರಯತ್ನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೂಪಾ ಮೌದ್ಗಿಲ್ ಮೇಲೂ ಸಹ ಕರಕುಶಲ ನಿಗಮದಲ್ಲಿ ಹಲವಾರು ಆಪಾದನೆಗಳಿದ್ದು, ಇಲಾಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿಯವರು ಮೌನವಾಗಿದ್ದಾರೆ. ಇವೆಲ್ಲವನ್ನೂ ಮಾಧ್ಯಮಗಳ ಮೂಲಕ ನೋಡುತ್ತಿರುವ ನಾಡಿನ ಜನರು ನಮ್ಮ ಆಡಳಿತದ ವ್ಯವಸ್ಥೆಯ ಬಗ್ಗೆ ಕೆಟ್ಟದಾಗಿ ಅರ್ಥೈಸುತ್ತಿದ್ದಾರೆ. ಮತ್ತು ಸರ್ಕಾರದ ಕ್ಷಮತೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವನಾಥ ಹೇಳಿದರು.