ಕರ್ನಾಟಕ

karnataka

ETV Bharat / state

ಪ್ಲಾಸ್ಟಿಕ್ ನಿಷೇಧ: ಯಲಹಂಕದಲ್ಲಿ ಆದೇಶ ಉಲ್ಲಂಘಿಸಿ ಎಗ್ಗಿಲ್ಲದೆ ನಡೆಯುತ್ತಿದೆ ಮಾರಾಟ

ಯಲಹಂಕದಲ್ಲಿ ಪ್ಲಾಸ್ಟಿಕ್​ ನಿಷೇಧ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ರಾಜಾರೋಷವಾಗಿ ಪ್ಲಾಸ್ಟಿಕ್​ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಪ್ಲಾಸ್ಟಿಕ್ ನಿಷೇಧಕ್ಕೆ ಕಿಂಚಿತ್ತು ಬೆಲೆಯಿಲ್ಲ

By

Published : May 5, 2019, 10:49 AM IST

ಬೆಂಗಳೂರು:ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದಾಗಿ ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿತ್ತು. ಆದರೆ, ಬಿಬಿಎಂಪಿ ಯಲಹಂಕ ವಲಯ ವ್ಯಾಪ್ತಿಯ ಬಹುತೇಕ ಕಡೆ ಈ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.

ಯಲಹಂಕದ ವಾರ್ಡ್ ನಂ.1,2,3,4 ವ್ಯಾಪ್ತಿಯಲ್ಲಂತೂ ರಾಜ್ಯ ಸರ್ಕಾರದ ಆದೇಶಕ್ಕೆ ಕಿಂಚಿತ್ತು ಬೆಲೆ ಕೊಡದೆ, ತಮ್ಮ ವ್ಯಾಪಾರ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ವಿಂಟಾಲ್ ಲೆಕ್ಕದಲ್ಲಿ ಪ್ಲಾಸ್ಟಿಕ್ ಅನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸಣ್ಣಪುಟ್ಟ ಅಂಗಡಿಗಳಲ್ಲಿ ಒಂದೆರಡು ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 15-20 ಕೆ.ಜಿ ಲೆಕ್ಕ ತೋರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.

ಪ್ಲಾಸ್ಟಿಕ್ ನಿಷೇಧಕ್ಕೆ ಕಿಂಚಿತ್ತು ಬೆಲೆಯಿಲ್ಲ

‘ಪರಿಸರ ಸಂರಕ್ಷಣೆ ಕಾಯ್ದೆ 1986’ರ ಸೆಕ್ಷನ್‌ 5ರ ಪ್ರಕಾರ, 2016ರ ಮಾ. 11ರಂದು ಅಧಿಸೂಚನೆ ಹೊರಡಿಸಿ ಕ್ಯಾರಿ ಬ್ಯಾಗ್‌, ಬ್ಯಾನರ್‌, ಬಂಟಿಂಗ್ಸ್‌, ಧ್ವಜ, ಫ್ಲೆಕ್ಸ್‌, ಪ್ಲೇಟ್‌, ಥರ್ಮೊಕೋಲ್‌ ಕಪ್ಸ್‌ ಮತ್ತು ಟೇಬಲ್‌ ಮೇಲೆ ಹಾಸುವ ಪ್ಲಾಸ್ಟಿಕ್‌ ಹಾಳೆಗಳ ಬಳಕೆ ಸೇರಿದಂತೆ ಥರ್ಮೊಕೋಲ್, ಪ್ಲಾಸ್ಟಿಕ್ ಮೈಕ್ರೊ ಬೀಡ್ಸ್‌ನಿಂದ ತಯಾರಿಸಿದ ವಸ್ತುಗಳಿಗೂ ಇದು ಅನ್ವಯವಾಗುವಂತೆ ನಿಷೇಧ ವಿಧಿಸಿತ್ತು.

ನಮ್ಮ ವ್ಯಾಪ್ತಿಗೆ ಬರುವುದಿಲ್ಲ:

ಹೋಟೆಲ್, ಚಿಕನ್, ಮಟನ್ ಅಂಗಡಿಗಳಲ್ಲಿ 60 ಮೈಕ್ರಾನ್ ಗಳಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕವರ್​ಗಳನ್ನು ಎಗ್ಗಿಲ್ಲದೆ ಬಳಸುತ್ತಿದ್ದಾರೆ. ಈ ಸಂಬಂಧ ಬಿಬಿಎಂಪಿ ವಾರ್ಡ್ ವ್ಯಾಪ್ತಿಯ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಲು ಹೋದರೆ, ಅವರು ಕೈಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಸಹ, ನಮ್ಮ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಬಹುತೇಕ ನಿಷೇಧವಾಗಿದೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ.

ಬೇಜವಾಬ್ದಾರಿ ಆರೋಗ್ಯಾಧಿಕಾರಿ:

ಯಲಹಂಕ ವಲಯ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್ ಮಾರಾಟ ನಡೆಯುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿಲ್ಲ‌ ಎಂಬ ಆರೋಪವಿದೆ. ಈ ಸಂಬಂಧ ಯಲಹಂಕ ವಲಯ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿದಾಗ ಯಾವ ಏರಿಯಾ? ಯಾವ ಅಂಗಡಿ ಎಂದು ಮಾಹಿತಿ ಪಡೆದರು. ದಾಳಿ ಮಾಡುವುದಾಗಿ ಹೇಳಿದ್ದಾರೆ.

ಕಾಟಾಚಾರಕ್ಕೆ ದಾಳಿ:

ಈ ಹಿಂದೆ ಬಿಬಿಎಂಪಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ಯಲಹಂಕದ ಆರ್.ಎಂ. ಜೆಡ್ ಮಾಲ್ ಮೇಲೆ ದಾಳಿ ನಡೆಸಿ, 2.8ಲಕ್ಷ ರೂ. ದಂಡ 200 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದರು. ದಾಳಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಯಲಹಂಕ ವಲಯ ಆರೋಗ್ಯಾಧಿಕಾರಿ ನವೀನ್ ಕುಮಾರ್, ಮುಂದಿನ ದಿನಗಳಲ್ಲಿ ಯಲಹಂಕ ವಲಯ ವ್ಯಾಪ್ತಿಯಲ್ಲಿನ ಅಂಗಡಿಗಳು ಹಾಗೂ ಮಾಲ್​ಗಳಲ್ಲಿ ಅನಧಿಕೃತವಾಗಿ ಬಳಸುವ ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳುವ ಭರವಸೆ ನೀಡಿದ್ದರು.

ABOUT THE AUTHOR

...view details