ಬೆಂಗಳೂರು:ಕೋವಿಡ್ ಕಾರಣಕ್ಕೆ ರಾಜ್ಯದಲ್ಲಿ ಶಾಲಾರಂಭ ಸಾಧ್ಯವಾಗ್ತಿಲ್ಲ. ಈ ಕಾರಣಕ್ಕೆ ಸರ್ಕಾರಿ ಶಾಲಾ ಮಕ್ಕಳಿಗಾಗಿ ವಿದ್ಯಾಗಮ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿ ಮಾಡಿತ್ತು. ಆದರೆ ವಿದ್ಯಾಗಮ ಯೋಜನೆಯಲ್ಲಿ ಆದ ಲೋಪದೋಷದಿಂದಾಗಿ ಸ್ಥಗಿತವಾಗಿತ್ತು. ಇದೀಗ ಮತ್ತೆ ಹೊಸ ರೂಪದಲ್ಲಿ ವಿದ್ಯಾಗಮ ಯೋಜನೆ ಪುನಾರಂಭವಾಗಲಿದೆ.
ಕೋವಿಡ್ನಿಂದ ಶಾಲಾರಂಭ ತಡವಾಗುವ ಹಿನ್ನೆಲೆ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಮತ್ತೆ ವಿದ್ಯಾಗಮ ಯೋಜನೆಯನ್ನು ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೀತಿಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಕಳೆದ ಆಗಸ್ಟ್ 8ರಿಂದ ಆರಂಭಿಸಲಾಗಿದ್ದ ವಿದ್ಯಾಗಮ ಯೋಜನೆಯನ್ನು ಅಕ್ಟೋಬರ್ 10ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಮಕ್ಕಳು ಶಾಲೆಯಿಂದ ದೂರ ಉಳಿಯುವುದು, ಗ್ರಾಮೀಣ ಪ್ರದೇಶದಲ್ಲಿ ಪೋಷಕರೊಂದಿಗೆ ಶಾಲಾ ಸಮಯದಲ್ಲಿ ಕೆಲಸಗಳಿಗೆ ತೆರಳುವುದು. ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪಿಡುಗುಗಳನ್ನ ತಪ್ಪಿಸಲು ವಿದ್ಯಾಗಮ ಸಹಕಾರಿಯಾಗಿತ್ತು. ಉಚ್ಚ ನ್ಯಾಯಾಲಯದ ಅಪೇಕ್ಷೆಯನುಸಾರ ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೂಪದಲ್ಲಿ ಯೋಜನೆ ಅನುಷ್ಠಾನವಾಗಲಿದ್ದು, 2021ನೇ ಜನವರಿ 1ರಿಂದಲೇ ಆರಂಭವಾಗಲಿದೆ.
ಶಿಕ್ಷಣ ಇಲಾಖೆಯಿಂದ ಹಲವು ಸುಧಾರಣಾ ಕ್ರಮ ಕೈಗೊಂಡಿದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಪಾಠ ನಡೆಯಲಿದೆ. ಆನ್ಲೈನ್, ಚಂದನ ವಾಹಿನಿಯ ಪಾಠಗಳು ಎಂದಿನಂತೆ ಮುಂದುವರೆಯಲಿದ್ದು, ಅರ್ಧ ದಿನ ಮಕ್ಕಳು ಮಾಸ್ಕ್ ಧರಿಸಿ ಶಾಲಾವರಣಕ್ಕೆ ಬರಬೇಕು. ಸಾಮಾಜಿಕ ಅಂತರದೊಂದಿಗೆ ಕುಳಿತು ಪಾಠ ಕಲಿಯಬೇಕು. ಹಾಗೇ ವಿದ್ಯಾಗಮಕ್ಕೆ ಪೋಷಕರ ಅನುಮತಿ ಪತ್ರ ಕಡ್ಡಾಯ ಮಾಡಲಾಗಿದೆ.