ಕರ್ನಾಟಕ

karnataka

ETV Bharat / state

ಜೂನ್​ ತಿಂಗಳಲ್ಲಿ ವಿಧಾನ ಪರಿಷತ್​​ಗೆ ಚುನಾವಣೆ

2020ರ ಜೂನ್ ತಿಂಗಳಲ್ಲಿ ವಿಧಾನ ಪರಿಷತ್​ನ 16 ಸದಸ್ಯರು ನಿವೃತ್ತಿಯಾಗಲಿದ್ದಾರೆ. ಜೂನ್ 23ರಂದು ಐವರು ನಾಮನಿರ್ದೇಶಿತ ಸದಸ್ಯರು ಹಾಗೂ ಜೂ. 30ರಂದು 11 ಮಂದಿ ಸದಸ್ಯರು ಸೇರಿದಂತೆ ಒಟ್ಟು 16 ಮಂದಿ ನಿವೃತ್ತಿಯಾಗಲಿದ್ದಾರೆ. ಇದರಿಂದ ರಾಜ್ಯದಲ್ಲಿ ವಿಧಾನಸಭೆ ಉಪ ಚುನಾವಣೆ ನಡೆದ ಬೆನ್ನಲ್ಲೇ ವಿಧಾನ ಪರಿಷತ್​ನ ಮತ್ತೊಂದು ಚುನಾವಣೆ ಜೂನ್​​ನಲ್ಲಿ ನಡೆಯಲಿದೆ.

Council election
ವಿಧಾನ ಪರಿಷತ್

By

Published : Dec 27, 2019, 5:22 PM IST

ಬೆಂಗಳೂರು: ಇತ್ತೀಚೆಗಷ್ಟೇ ವಿಧಾನಸಭೆಯ ಉಪ ಚುನಾವಣೆ ಮುಗಿದಿದೆ. ರಾಜ್ಯದಲ್ಲಿ ಮತ್ತೆ ಯಾವ ಚುನಾವಣೆ ಅಂತೀರಾ? ಇಲ್ಲಿದೆ ಪೂರ್ಣ ಮಾಹಿತಿ.

2020ರ ಜೂನ್ ತಿಂಗಳಲ್ಲಿ ವಿಧಾನ ಪರಿಷತ್​​ನ 16 ಸದಸ್ಯರು ನಿವೃತ್ತಿಯಾಗಲಿದ್ದಾರೆ. ಜೂನ್ 23ರಂದು ಐವರು ನಾಮನಿರ್ದೇಶಿತ ಸದಸ್ಯರು ಹಾಗೂ ಜೂ. 30ರಂದು 11 ಮಂದಿ ಸದಸ್ಯರು ಸೇರಿದಂತೆ ಒಟ್ಟು 16 ಮಂದಿ ನಿವೃತ್ತಿಯಾಗಲಿದ್ದಾರೆ. ಇದರಿಂದ ರಾಜ್ಯದಲ್ಲಿ ವಿಧಾನಸಭೆ ಉಪ ಚುನಾವಣೆ ನಡೆದ ಬೆನ್ನಲ್ಲೇ ವಿಧಾನ ಪರಿಷತ್​ನ ಮತ್ತೊಂದು ಚುನಾವಣೆ ಜೂನ್​​ನಲ್ಲಿ ನಡೆಯಲಿದೆ.

ಪದವೀಧರ ಕ್ಷೇತ್ರದಿಂದ ಇಬ್ಬರು, ಶಿಕ್ಷಕರ ಕ್ಷೇತ್ರದಿಂದ ಇಬ್ಬರು, ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಚುನಾಯಿತರಾಗಿರುವ ಐವರು ಹಾಗೂ ಐದು ಮಂದಿ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ನಿವೃತ್ತಿಯಿಂದ 16 ವಿಧಾನ ಪರಿಷತ್​ನ ಸದಸ್ಯ ಸ್ಥಾನಗಳು ತೆರವಾಗಲಿವೆ. ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಆಯ್ಕೆಯಾಗಿರುವ ಸದಸ್ಯರಾದ ಕಾಂಗ್ರೆಸ್​ನ ಹೆಚ್.ಎಂ.ರೇವಣ್ಣ, ಎನ್.ಎಸ್.ಬೋಸರಾಜು, ಜಯಮ್ಮ, ನಸೀರ್ ಅಹಮ್ಮದ್, ಜೆಡಿಎಸ್ ಸದಸ್ಯರಾದ ಟಿ.ಎ.ಶರವಣ ಹಾಗೂ ಮಲ್ಲಿಕಾರ್ಜುನ ಜೂ. 30ರಂದು ನಿವೃತ್ತಿಯಾಗಲಿದ್ದಾರೆ.

ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಜೆಡಿಎಸ್ ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ, ಬಿಜೆಪಿ ಸದಸ್ಯ ಎಸ್.ಪಿ.ಸುಂಕನೂರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆಡಿಎಸ್ ಸದಸ್ಯ ಪುಟ್ಟಣ್ಣ, ಕಾಂಗ್ರೆಸ್ ಸದಸ್ಯ ಶರಣಪ್ಪ ಮಟ್ಟೂರ್ ಕೂಡ ಜೂ. 30ರಂದೇ ನಿವೃತ್ತಿಯಾಗಲಿದ್ದಾರೆ. ನಾಮನಿರ್ದೇಶಿತ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಡಾ. ಜಯಮಾಲಾ, ಐವಾನ್ ಡಿಸೋಜ, ಇಕ್ಬಾಲ್ ಅಹಮ್ಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರ ಜೂ. 23ರಂದು ನಿವೃತ್ತಿಯಾಗಲಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾದ ರಿಜ್ವಾನ್ ಹರ್ಷದ್ ಅವರಿಂದ ತೆರವಾದ ಸ್ಥಾನ ಖಾಲಿಯಿದ್ದು, ಆ ಸ್ಥಾನಕ್ಕೂ ಚುನಾವಣೆ ನಡೆಯಬೇಕಿದೆ. ಒಂದೇ ಸ್ಥಾನ ಇರುವುದರಿಂದ ಚುನಾವಣೆ ನಡೆದರೆ ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಹೊಂದಿರುವ ಆಡಳಿತಾರೂಢ ಬಿಜೆಪಿಗೆ ಈ ಸ್ಥಾನ ಸುಲಭವಾಗಿ ದಕ್ಕಲಿದೆ.

ಈಗಾಗಲೇ ಕೇಂದ್ರ ಚುನಾವಣಾ ಆಯೋಗ, ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಂಡಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಿಂದ ಸ್ಪರ್ಧಿಸುವ ಆಕಾಂಕ್ಷಿಗಳು ಚುನಾವಣಾ ಸಿದ್ಧತೆಯಲ್ಲೂ ನಿರತರಾಗಿದ್ದಾರೆ. ಆದರೆ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ವಿಧಾನಸಭೆಯಲ್ಲಿ ಈಗಿರುವ ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ-3, ಕಾಂಗ್ರೆಸ್- 2 ಹಾಗೂ ಜೆಡಿಎಸ್​ನ 1 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ.

ಆಡಳಿತಾರೂಢ ಬಿಜೆಪಿ ನಾಲ್ಕನೇ ಸ್ಥಾನವನ್ನು ಪಡೆಯಲು ಪಕ್ಷೇತರರು ಹಾಗೂ ಇತರೆ ಶಾಸಕರ ಬೆಂಬಲವನ್ನು ಪಡೆಯಬೇಕಾಗುತ್ತದೆ ಎಂಬುದು ರಾಜಕೀಯ ಪರಿಣಿತರ ಲೆಕ್ಕಾಚಾರ. ನಿವೃತ್ತಿಯಾಗುವ ಐದು ಮಂದಿ ನಾಮನಿರ್ದೇಶಿತ ಸದಸ್ಯರ ಸ್ಥಾನಕ್ಕೆ ಸರ್ಕಾರವೇ ನಾಮನಿರ್ದೇಶನ ಮಾಡುವುದರಿಂದ ಬಿಜೆಪಿಗೆ ಸಹಜವಾಗಿಯೇ ಅನುಕೂಲವಾಗಲಿದೆ. ಇದರಿಂದಾಗಿ ಉಪಚುನಾವಣೆಯಲ್ಲಿ ಸೋತವರಿಗೆ ಪರಿಷತ್ ಸ್ಥಾನ ಕಲ್ಪಿಸಲು ದಾರಿ ಸುಗಮವಾಗಲಿದೆ.

ABOUT THE AUTHOR

...view details