ಕರ್ನಾಟಕ

karnataka

ETV Bharat / state

ಖಾಸಗಿ ಶಾಲೆಗಳ ಅಗತ್ಯ ವಿನಾಯಿತಿಗೆ ಶೀಘ್ರ ಸಭೆ: ಸಚಿವ ಸುರೇಶ್‌ ಕುಮಾರ್‌ - minister suresh kumar

ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಅನುಮತಿಗಳನ್ನು ನೀಡುವಾಗ ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಅನಿವಾರ್ಯತೆ ಇದೆ. ಶೀಘ್ರವೇ ಅಧಿಕಾರಿಗಳ ಜೊತೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

very Soon take meeting for exemption of private schools
ಶಿಕ್ಷಕ ಕ್ಷೇತ್ರದ ಸದಸ್ಯರೊಂದಿಗೆ ನಡೆದ ಸಭೆ

By

Published : Sep 16, 2020, 8:57 PM IST

ಬೆಂಗಳೂರು: ಖಾಸಗಿ ಶಾಲೆಗಳ ನೋಂದಣಿ ನವೀಕರಣಕ್ಕೆ ಸಂಬಂಧಿಸಿದಂತೆ ಕೊರೊನಾ ಸಂದರ್ಭದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಅಗ್ನಿ ಶಾಮಕ ದಳವೂ ಸೇರಿದಂತೆ ಅಧಿಕಾರಿಗಳ ಸಭೆಯನ್ನು ಇಷ್ಟರಲ್ಲಿಯೇ ನಡೆಸಿ, ಅಗತ್ಯ ವಿನಾಯಿತಿ ನೀಡಲು ಸೂಚಿಸಲಾಗುವುದು ಎಂದು ಸಚಿವ ಎಸ್.ಸುರೇಶ್‌ ಕುಮಾರ್‌ ಹೇಳಿದರು.

ಸಚಿವ ಸುರೇಶ್‌ ಕುಮಾರ್‌

ಇಲ್ಲಿನ ಸಮಗ್ರ ಶಿಕ್ಷಣ ಕರ್ನಾಟಕ ಸಭಾಂಗಣದಲ್ಲಿ ನಡೆದ ವಿಧಾನ ಪರಿಷತ್​ನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರೊಂದಿಗೆ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸೃಷ್ಟಿಸಿರುವ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಮಸ್ಯೆಗಳ ಕುರಿತು ತಮಗೆ ಸಂಪೂರ್ಣ ಅರಿವಿದ್ದು, ಈ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಅನುಮತಿಗಳನ್ನು ನೀಡುವಾಗ ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಅನಿವಾರ್ಯತೆ ಇದೆ ಎಂದರು.

ಶಿಕ್ಷಣ ತಜ್ಞರ ವರದಿಯನ್ವಯ ಕೊರೊನಾ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಅನುಷ್ಠಾನಗೊಳಿಸಿರುವ ವಿದ್ಯಾಗಮ ಯೋಜನೆ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಹಲವು ರಾಜ್ಯಗಳು ಯೋಜನೆಯ ಉಪಯುಕ್ತತೆ ಕುರಿತು ಪ್ರಶಂಸೆ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದರು.

1ರಿಂದ 8ನೇ ತರಗತಿಯ ಮಕ್ಕಳಿಗೆ ಸ್ಥಳೀಯ ಕೇಬಲ್ ಚಾನೆಲ್​ಗಳ ಮೂಲಕ ತರಗತಿಗಳನ್ನು ನಡೆಸಲು ಕ್ರಮ ವಹಿಸಲಾಗುತ್ತಿದ್ದು, ಇಷ್ಟರಲ್ಲಿಯೇ ಪ್ರಾರಂಭವಾಗಲಿದೆ. ಸಂವೇದಾ ತರಗತಿಗಳು ವಿದ್ಯಾಗಮದೊಂದಿಗೆ ಸಂಯೋಜನೆಗೊಂಡಿದ್ದು, ನಮ್ಮ ಇಲಾಖೆಯ ಯೂ-ಟೂಬ್‌ ಚಾನೆಲ್​ನಲ್ಲಿ ಸಹಾ ಲಭ್ಯವಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಗಟ್ಟಿಯಾದ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದ್ದು, ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಜೊತೆಗೂಡಿ ಇಷ್ಟರಲ್ಲಿಯೇ ವರದಿಯನ್ನು ಲೋಕಾರ್ಪಣೆಗೊಳಿಸಲಿದೆ. ಈ ನೀತಿಯನ್ನು ಅನುಷ್ಠಾನಗೊಳಿಸಲಿರುವ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಮಧ್ಯಾಹ್ನದ ಬಿಸಿಯೂಟ ನೌಕರರದ್ದೂ ಸಹ ಸಮಸ್ಯೆಗಳಿವೆ. 15 ದಿನಗಳ ಹಿಂದೆ, ಕಳೆದ 3-4 ತಿಂಗಳ (ಜೂನ್-ಆಗಸ್ಟ್) ರೂ.93.46 ಕೋಟಿ ಸಂಭಾವನೆಯನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಉಳಿದ ಸಮಸ್ಯೆಗಳಾದ ಕನಿಷ್ಠ ವೇತನ, ಸೇರಿದಂತೆ ಉಳಿದ ಸಮಸ್ಯೆ ಬಗೆ ಹರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ಆರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಕಾರಣ ಖಾಲಿ ಯಾದ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆ ನಿರ್ಬಂಧ ಹೇರಿದೆ. ಇಷ್ಟರಲ್ಲಿಯೇ ಈ ಮಿತವ್ಯಯವನ್ನು ಸಡಿಲಿಸಲು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೇಮಕಾತಿಯನ್ನು ಮುಂದುವರೆಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ಬಡ್ತಿ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಶಿಕ್ಷಣ ಇಲಾಖೆಗೆ ಬಹಳ ದೊಡ್ಡ ಸವಾಲುಗಳನ್ನು ತಂದೊಡ್ಡಿದೆ. ಕಳೆದ ಸಾಲಿನಲ್ಲಿ ಶಾಲಾ, ಕಾಲೇಜುಗಳನ್ನು ಅವಧಿ ಪೂರ್ವದಲ್ಲಿ ಮುಚ್ಚಿ 1ರಿಂದ 9ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸುವ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನಾವು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಹೇಳಿದರು.

ABOUT THE AUTHOR

...view details