ಬೆಂಗಳೂರು: ಹೃದಯದಿಂದ ರಕ್ತಸಾಗಿಸುವ ಮಹಾಪಧಮನಿಯ ಕವಾಟವು ಸಂಪೂರ್ಣ ತಿರುಚಿಕೊಂಡು, ಹೃದಯ ವೈಫಲ್ಯದಿಂದ ಬಳಲುತ್ತಿದ್ದ 64 ವರ್ಷದ ಮಹಿಳೆಗೆ ಬೆಂಗಳೂರಿನ ಎಲ್ಲಾ ಪ್ರತಿಷ್ಠಿತ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸಾಧ್ಯವಾಗದೇ ಕೈಚೆಲ್ಲಿದ ಸಂದರ್ಭದಲ್ಲಿ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಕ್ಲಿಷ್ಟಕರವಾದ ಸ್ಥಿತಿಯಲ್ಲಿದ್ದ ವೃದ್ಧ ಮಹಿಳೆಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಸಾವಿನ ದವಡೆಯಿಂದ ತಪ್ಪಿಸಿದ್ದಾರೆ.
ದೆಶದಲ್ಲಿಯೇ ಅತಿ ಅಪರೂಪದ ಹೈಬ್ರಿಡ್ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ (TAVR) ಆಧುನಿಕ ತಂತ್ರಜ್ಞಾನದ ಹಾರ್ಟ್ನ ಮಹಾಪಧಮನಿಯ ಕವಾಟದ ಬಲಾವಣೆ ಮಾಡಿ ಜೀವನದ ಆಸೆಯನ್ನೇ ಮರೆತಿದ್ದ ಮಹಿಳೆಯ ಹೃದಯದಲ್ಲಿ ನಗು ಅರಳಿದೆ. ಬೆಂಗಳೂರಿನ ಹೊರವಲಯದ ದೇವನಹಳ್ಳಿ ನಿವಾಸಿಯಾದ ಶ್ರೀಮತಿ ಹಂಸವೇಣಿಯವರು ಹೈದಯ ವೈಫಲ್ಯದಿಂದ ನರಳುತ್ತಿದ್ದರು. ರಾಜಧಾನಿಯ ಪ್ರತಿಷ್ಠಿತ ಹೃದಯ ಚಿಕಿತ್ಸೆ ಆಸ್ಪತ್ರೆಗಳು ರೋಗಿಯ ಕ್ಲಿಷ್ಟಕರ ಪರಿಸ್ಥಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೇ ಅಸಹಾಯಕತೆ ವ್ಯಕ್ತಪಡಿಸಿದವು. ನಂತರ ಹಂಸವೇಣಿಯವರು ಬನ್ನೇರುಘಟ್ಟ ರಸ್ತೆಯ ಫೋರ್ಟೀಸ್ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅಲ್ಲಿನ ವೈದ್ಯರ ತಂಡ ಬಹು ಅಂಗಾಂಗದಿಂದ ಬಳಲುತ್ತಿರುವ ಹಿರಿಯ ಮಹಿಳೆಗೆ ಚಿಕಿತ್ಸೆ ನೀಡುವುದನ್ನು ಸವಾಲಾಗಿ ಸ್ವೀಕರಿಸಿದರು.
ಮಹಿಳೆಯ ಹೃದಯ ತಪಾಸಣೆ ನಡೆಸಿದಾಗ ರಕ್ತಸರಬರಾಜು ಮಾಡುವ ಹೃದಯದ ಮಹಾಪಧಮನಿಯ ಕವಾಟವು ಸಂಪೂರ್ಣ ತಿರುಚಿಕೊಂಡು, ಅಪಾಯದ ಹಂತ ತಲುಪಿತ್ತು. 64 ವರ್ಷದ ಮಹಿಳೆಗೆ ಯಶಸ್ವಿಯಾಗಿ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ ( TAVR) ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಭಾರತದಲ್ಲೇ ಮೊದಲ ಬಾರಿಗೆ ಹೈಬ್ರಿಡ್ TAVR ವಿಧಾನದ ಮೂಲಕ ನಡೆಸಿದ ಶಸ್ತ್ರಚಿಕಿತ್ಸೆಯಾಗಿದೆ ಎಂದು ಅಪರೂಪದ ಚಿಕಿತ್ಸೆಯ ನೇತೃತ್ವ ವಹಿಸಿದ್ದ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಹಿರಿಯ ಸಲಹೆಗಾರ ಡಾ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಮಹಿಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರವಾಗಿತ್ತು. ದೇಶದಲ್ಲಿಯೇ ಅತಿ ಅಪರೂಪವೆನ್ನಬಹುದಾದಂತ ಶಸ್ತ್ರಚಿಕಿತ್ಸೆ ನಡೆಸಲು ಹೃದ್ರೋಗ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ಸಾಮಾನ್ಯ ಶಸ್ತ್ರಚಿಕಿತ್ಸಕರು, ಆಂತರಿಕ ಔಷಧ ತಜ್ಞರು, ಗ್ಯಾಸ್ಟ್ರೋಎಂಟರಾಲಜಿಸ್ಟ್, ನೆಫ್ರಾಲಜಿಸ್ಟ್ ಮತ್ತು ಅರಿವಳಿಕೆಶಾಸ್ತ್ರಜ್ಞ ಸೇರಿದಂತೆ ಬಹುದೊಡ್ಡ ತಂಡವೇ ಶ್ರಮಿಸಿ ಅತ್ಯಾಧುನಿಕ ತಂತ್ರಜ್ನಾದ ಮಾದರಿ ಬಳಸಿಕೊಂಡು ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ ಎಂದು ಡಾ. ಶ್ರೀನಿವಾಸ್ ಮಾಹಿತಿ ನೀಡಿದರು.
ಫೋರ್ಟಿಸ್ ಆಸ್ಪತ್ರೆ ಹಿರಿಯ ಹೃದಯತಜ್ಞ ಡಾ ವಿವೇಕ್ ಜವಳಿ ಮಾತನಾಡಿ, 64 ವರ್ಷದ ಹಂಸವೇಣಿ ಎಂಬ ಮಹಿಳೆ ಹತ್ತು ವರ್ಷದಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಇದಲ್ಲದೆ, ವಂಶ ಹೃದಯ ಕವಾಟದ ಅಸ್ವಸ್ಥತೆಯಿಂದ ಬಳಲಿ, ಮಹಾಪಧಮನಿಯ ಕವಾಟ ಬದಲಾವಣೆ ಮತ್ತು ಸಿಎಬಿಜಿ (ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್) ಶಸ್ತ್ರಚಿಕಿತ್ಸೆಗೆ ಒಳಗೊಂಡಿದ್ದರು. ಇತ್ತೀಚಿಗೆ ಅವರು ಎದೆಯ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಗೆ ಒಳಗಾದರು. ಪರೀಕ್ಷೆಯಲ್ಲಿ ಏಕನಾಳದ ಪರಿಧಮನಿಯ ಕಾಯಿಲೆ ಇರುವುದು ಪತ್ತೆಯಾಯಿತು. ಮಹಿಳೆಯ ಹಿಂದಿನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಳವಡಿಸಲಾದ ಪ್ರಾಸ್ಥೆಟಿಕ್ ಕವಾಟವು ವಿಫಲವಾಗಿದ್ದರಿಂದ, ರಕ್ತನಾಳವು ತೀವ್ರವಾಗಿ ಹಾನಿಗೊಳಗಾಗಿತ್ತು. ಇದರಿಂದ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ಎಂದರು.