ಬೆಂಗಳೂರು: ಕರ್ನಾಟಕದಲ್ಲಿ ವೀರಶೈವ, ಒಕ್ಕಲಿಗ ಹಾಗೂ ಕುರುಬರ ಜನಸಂಖ್ಯೆ ಪ್ರಬಲವಾಗಿದೆ. ಇಷ್ಟಾದರೂ ವೀರಶೈವ ಸಮುದಾಯವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿರುವುದು ಶೋಚನೀಯ. ಒಕ್ಕಲಿಗ ವೀರಶೈವ ಲಿಂಗಾಯತ ಸೌಹಾರ್ದ ವೇದಿಕೆಯಿಂದ ಈ ತಪ್ಪು ಕಲ್ಪನೆ ಹೋಗಲಾಡಿಸುವ ಹೋರಾಟ ಕೈಗೊಂಡಿದೆ ಎಂದು ಎಡೆಯೂರು ಶ್ರೀಗಳು ಹೇಳಿದರು.
ನಗರದ ಮಲ್ಲೇಶ್ವರಂನಲ್ಲಿ ಒಕ್ಕಲಿಗ, ವೀರಶೈವ, ಲಿಂಗಾಯತ ಸೌಹಾರ್ದ ವೇದಿಕೆ ಆಯೋಜನೆ ಮಾಡಿದ ಜಾತಿ ಜನಗಣತಿ ಹೆಸರಿನಲ್ಲಿ ರಾಜಕೀಯ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಹಲವು ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.
ಒಕ್ಕಲಿಗ, ವೀರಶೈವ, ಲಿಂಗಾಯತ ಸೌಹಾರ್ದ ವೇದಿಕೆ ಆಯೋಜನೆ ಮಾಡಿದ್ದ ಕಾರ್ಯಕ್ರಮ ಈ ವೇಳೆ ವಿಭೂತಿಪುರ ಮಠದ ಶ್ರೀಗಳು ಮಾತನಾಡಿ ರಾಜಕಾರಣ ಮತ್ತು ಷಡ್ಯಂತ್ರ ಒಂದು ನಾಣ್ಯದ ಎರಡು ಮುಖಗಳಂತಾಗಿದೆ. ಅಶೋಕನ ಕಾಲದಿಂದಲೂ ಷಡ್ಯಂತ್ರ ರಾಜಕೀಯ ನಡೆದುಕೊಂಡು ಬರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಗುರುಗಳ ಪ್ರಭಾವ ರಾಜಕಾರಣಿಗಳ ಮೇಲೆ ಸಾಂದರ್ಭಿಕವಾಗಿದೆ. ವೈಯಕ್ತಿಕ ಲಾಭದಿಂದ ಗುರುಗಳ ಬಳಿ ಬರುವ ಪರಂಪರೆ ನಡೆದುಕೊಂಡು ಬರುತ್ತಿದೆ. ಜಾತಿ ಜನಗಣತಿ ಮಾಡಿ ಕರ್ನಾಟಕದಲ್ಲಿ ಬಹುಸಂಖ್ಯಾತ ಸಮುದಾಯಗಳನ್ನು ಅಲ್ಪಸಂಖ್ಯಾತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.
ನಂತರ ಪಂಚಮಸಾಲಿ ಗೌಡ ಲಿಂಗಾಯತ ಸಮುದಾಯ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಸಿಎಂ ಆದವರು ಸಂವಿಧಾನಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ಅಂದಿನ ಮುಖ್ಯಮಂತ್ರಿಗಳು ನಡೆದುಕೊಂಡಿದ್ದಾರೆ. ಜಾತಿಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರ ಕೊಟ್ಟಿಲ್ಲ. ಅಂದಿನ ಸಿಎಂ ಸಿದ್ಧರಾಮಯ್ಯ ಹಾಗೂ ಹಿಂದುಳಿದ ವರ್ಗದ ಕಾಂತರಾಜ್ ರಾಜ್ಯದ ಜನರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ. ಜಾತಿ ಗಣತಿ ಹೆಸರಲ್ಲಿ 180 ಕೋಟಿ ರೂ. ಪೋಲು ಮಾಡಿದ್ದಾರೆ. ಹಿಂದುಳಿದ ವರ್ಗದಿಂದ 180 ಕೋಟಿ ರೂ. ದುರ್ಬಳಕೆ ಆಗಿದೆ. ಸಂವಿಧಾನದ ವಿರುದ್ಧ ನಡೆದುಕೊಂಡ ಸಿದ್ಧರಾಮಯ್ಯ, ಕಾಂತರಾಜ್ ಮೇಲೆ ನಾವು ದೂರು ದಾಖಲಿಸುತ್ತೇವೆ. ಸಾರ್ವಜನಿಕ ಹಣವನ್ನು ಪೋಲು ಮಾಡಿದವರನ್ನು ಕೋರ್ಟ್ ಕಟಕಟೆಗೆ ತಂದು ನಿಲ್ಲಿಸುತ್ತೇವೆ.
ಮುಂದೆ ಬರುವ ಯಾವ ಮುಖ್ಯಮಂತ್ರಿಯೂ ಸಂವಿಧಾನಕ್ಕೆ ವಿರುದ್ಧವಾದ ಕೆಲಸ ಮಾಡಬಾರದು. ಹೀಗಾಗಿ ಒಕ್ಕಲಿಗ ಗೌಡ, ಲಿಂಗಾಯತ ಸೇರಿ ನಾವು ಈ ಕಾರ್ಯಕ್ರಮ, ಹೋರಾಟ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುವ ಆಲೋಚನೆ ಇದೆ ಎಂದರು.
ಜನಸಂಖ್ಯೆಗೆ ತಕ್ಕವಾಗಿ ಲಿಂಗಾಯತರಿದ್ದರೂ ಕಾಂತರಾಜ್ ಅವರ ವರದಿ ಪ್ರಕಾರ ಲಿಂಗಾಯತರ ಜನಸಂಖ್ಯೆ 50 ಲಕ್ಷ ಇದೆ. ಹಾಗಿದ್ರೆ ಉಳಿದವರು ಸತ್ತು ಹೋದರಾ?, ಬೇರೆ ದೇಶಕ್ಕೆ ಪಲಾಯನ ಮಾಡಿದ್ರಾ?, ಸಿದ್ಧರಾಮಯ್ಯ, ತಮ್ಮ ಜಾತಿಯೇ ಬೃಹತ್ ಸಂಖ್ಯೆಯಲ್ಲಿ ಇದೆ ಅಂತ ತೋರಿಸಲು, ಉಳಿದ ಜಾತಿಗಳ ಜನಸಂಖ್ಯೆ ಕಡಿಮೆ ಇದೆ ಎಂದು ತೋರಿಸಿ ಈ ಮೂಲಕ ರಾಷ್ಟ್ರೀಯ ಪಕ್ಷಗಳು ಶಾಸಕ ಸ್ಥಾನವನ್ನು ನಮಗೆ ಜಾಸ್ತಿ ಕೊಡಲಿ ಎಂಬ ದುರುದ್ದೇಶದಿಂದ ಈ ರೀತಿ ಕಾರ್ಯ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಓದಿ: ತಾಲಿಬಾನ್ ಉಗ್ರರ ಸಮಸ್ಯೆಯಿಂದ ತೈಲ ಬೆಲೆ ಏರಿಕೆಯಾಗಿದೆ : ಬಿಜೆಪಿ ಶಾಸಕ ಅರವಿಂದ ಬೆಲ್ಲದ್