ಬೆಂಗಳೂರು :ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನು ಕುಂದಿಸಲಾಗಿದೆ. ಕಣ್ಣಿಗೆ ಕಾಣದ ರೀತಿಯಲ್ಲಿ ಇರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಲೋಕಾಯುಕ್ತ ಸಂಸ್ಥೆ ಶಕ್ತಿಯುತವಾಗಬೇಕು. ಆಗ ಮಾತ್ರ ಕಾನೂನಿಗೆ ಭಾರೀ ಶಕ್ತಿ ಬರುತ್ತದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಸರ್ಕಾರ ತನ್ನ ಅಧೀನದಲ್ಲಿ ಕೆಲವು ಸಂಸ್ಥೆಗಳನ್ನು ಮಾಡಿಕೊಂಡಿದೆ. ಅದರಲ್ಲಿ ಸಿಸಿಬಿ ಕೂಡ ಒಂದು. ನನಗೆ ಅರ್ಥವಾಗುತ್ತಿಲ್ಲ. ಡ್ರಗ್ಸ್ ಪ್ರಕರಣ ಏನಾಯಿತು ಎಂಬುದೇ ಗೊತ್ತಾಗುತ್ತಿಲ್ಲ. ಅದು ಸಮಾಧಿಯಾಗಿದೆ. ನಂತರ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಏನಾಯಿತು?. ಇದನ್ನು ಗಮನಿಸಿದರೆ ರಮೇಶ್ ಜಾರಕಿಹೊಳಿ ಅವರನ್ನು ಹುತಾತ್ಮ ಮಾಡಲು ಹೊರಟಿದ್ದಾರೆ. ಸಿಡಿ ಪ್ರಕರಣದ ಹಿಂದೆ ಇರುವವರು ಯಾರು?. ಆ ಮಹಿಳೆಯ ಕಥೆ ಏನಾಯಿತು. ಎಲ್ಲವೂ ಕತ್ತಲೆಯಲ್ಲಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈಗ ಇನ್ನೊಂದು ಪ್ರಕರಣ ಹೊರ ಬಂದಿದೆ. ಸಚಿವರೊಬ್ಬರ ಪಿಎ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಸಿಎಂ ಪುತ್ರ ವಿಜಯೇಂದ್ರ ದೂರಿನ ಆಧಾರದ ಸಿಸಿಬಿ ಪೊಲೀಸರು ಸಚಿವರ ಪಿಎಯನ್ನು ಬೆಳಗ್ಗೆ ಸಚಿವರ ಮನೆಯಲ್ಲೇ ಬಂಧಿಸಿದ್ದಾರೆ. ಸಚಿವರು ಗರಂ ಆದರು. ಸಂಜೆ ಬಿಡುಗಡೆ ಮಾಡಿದ್ದಾರೆ.
ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಸಿಎಂ ಇದ್ದಾರೆ :ಮುಖ್ಯಮಂತ್ರಿಗಳು ತನಗೇನೂ ಗೊತ್ತಿಲ್ಲದಂತೆ ಇದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಸಿಎಂ ಇದ್ದಾರೆ. ಯಡಿಯೂರಪ್ಪನವರು ಗಂಭೀರವಾಗಿ ಅದನ್ನು ಚಿಂತನೆ ಮಾಡಿಲ್ಲ. ಆರೋಪ ಮಾಡಿದವರ ಬಗ್ಗೆ ಮಾತನಾಡುತ್ತಿಲ್ಲ. ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ. ಇಂತಹ ನಾಟಕವನ್ನು ನನ್ನ ಜೀವನದಲ್ಲಿ ನೋಡಿಲ್ಲ. ಕಾನೂನು, ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕಿದೆ. ಹಾಗಾಗಿ, ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಜುಲೈ 10ರಿಂದ ಪ್ರತಿಭಟನೆ :ಕರ್ನಾಟಕ ರಾಜ್ಯ ಕನ್ನಡ ಭಾಷೆಯನ್ನು ಕಳೆದುಕೊಳ್ಳುತ್ತಿದೆ. ಕನ್ನಡ ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ. ಕನ್ನಡಿಗರಿಗೆ ಮಾನ್ಯತೆ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕಾಗಿ ಇಡೀ ರಾಜ್ಯಾದ್ಯಂತ ಜುಲೈ 10ರಿಂದ ತೀವ್ರ ಹೋರಾಟ ಮಾಡುತ್ತೇವೆ.
ಕೋಲಾರ ಜಿಲ್ಲೆ ಕೆಜಿಎಫ್‌ನಲ್ಲಿ ಜುಲೈ 10ರಂದು ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದೆ. ರಾಜ್ಯದಲ್ಲಿ ಕನ್ನಡದ ಪರಿಸ್ಥಿತಿ ಹೀನಾಯವಾಗಿದೆ. ಬೆಂಗಳೂರು ಪರಭಾಷೆಯ ಕೈಯಲ್ಲಿ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.