ಬೆಂಗಳೂರು : ಅಮೆರಿಕದ ಸಂವಿಧಾನದ ಪರಿಚ್ಛೇದ 3ರ ಪ್ರಕಾರ ವಿದೇಶಿ ಪ್ರಜೆಗಳು ನ್ಯಾಯಾಂಗದ ಮೊರೆ ಹೋಗುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಟ್ವಿಟರ್ ಹೈಕೋರ್ಟ್ಗೆ ಬುಧವಾರ ಮಾಹಿತಿ ನೀಡಿದೆ. ಖಾತೆದಾರರಿಗೆ ಯಾವುದೇ ಮಾಹಿತಿ ನೀಡದೆ ಕೆಲವು ಖಾತೆಗಳನ್ನು ರದ್ದುಪಡಿಸಿದ್ದ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠಕ್ಕೆ, ಟ್ವಿಟರ್ ಪರ ವಕೀಲರು ಈ ಬಗ್ಗೆ ಮಾಹಿತಿ ನೀಡಿದರು.
ಸೋಮವಾರ ಇದೇ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಪೀಠ, ವಿದೇಶಗಳಲ್ಲಿ ಯಾವ ರೀತಿಯಲ್ಲಿ ಹೊರ ದೇಶದ ಕಂಪನಿಗಳು ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವ ಸಂಬಂಧ ಇರುವ ಅವಕಾಶಗಳ ಬಗ್ಗೆ ತಿಳಿಸುವಂತೆ ಸೂಚನೆ ನೀಡಿತ್ತು. ಈ ಸಂಬಂಧ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮನು ಕುಲಕರ್ಣಿ ನ್ಯಾಯಾಲಯಕ್ಕೆ ವಿವರಣೆ ನೀಡಿದರು.
ಅಲ್ಲದೆ, ಭಾರತ ಸಂವಿಧಾನದ ಪರಿಚ್ಛೇದ 19(ವಾಕ್ ಸ್ವಾತಂತ್ರ್ಯ)ವು ಅನ್ವಯವಾಗಲಿದೆ. ಶ್ರೇಯಾ ಸಿಂಘಾಲಾ ಪ್ರಕರಣದಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 69 ಎ ಸಂವಿಧಾನದ ಪರಿಚ್ಚೇದ 19ರೊಂದಿಗೆ ಒಳಗೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಯಾವುದೇ ಒಂದು ಸಂಸ್ಥೆ ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿದ್ದು ವ್ಯವಹಾರ ನಡೆಸುತ್ತಿರುವುದರಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅಮೆರಿಕ ದೇಶದಲ್ಲಿ ಈ ಅವಕಾಶವಿದ್ದರೂ, ನಮ್ಮ ಸಂವಿಧಾನದಲ್ಲಿ ಇಂತಹ ಅವಕಾಶಗಳನ್ನು ಕಲ್ಪಿಸಲಾಗಿಲ್ಲ ಎಂದು ಪ್ರಶ್ನೆ ಮಾಡಿತು.
ವಾದ ಮುಂದುವರೆಸಿದ ವಕೀಲರು, ಸಿವಿಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 83 ರಿಂದ 87ಗಳ ಅವಕಾಶಗಳಂತೆ ಅಮೆರಿಕದ ಸಂವಿಧಾನದ ಪರಿಚ್ಛೇದ 3ಕ್ಕೆ ಹೋಲಿಕೆಯಾಗಲಿದ್ದು, ವಿದೇಶಿಯರಿಗೆ ನ್ಯಾಯಾಂಗ ಹೋರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸಲಿದೆ. ಹೀಗಾಗಿ ಟ್ವಿಟರ್ ಅರ್ಜಿಯನ್ನು ಪರಿಗಣಿಸಬಹುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅಲ್ಲದೆ, ಕೇಂದ್ರ ಸರ್ಕಾರ ಖಾತೆಗಳನ್ನು ರದ್ದು ಮಾಡಿರುವುದು ಕಾನೂನು ಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ಮನವಿ ನ್ಯಾಯಪೀಠಕ್ಕೆ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 17ಕ್ಕೆ ಮುಂದೂಡಿತು.
ಇದನ್ನೂ ಓದಿ :ಅಂತಾರಾಷ್ಟ್ರೀಯ ಕಂಪನಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದೇ: ಟ್ಟಿಟರ್ಗೆ ಹೈಕೋರ್ಟ್ ಪ್ರಶ್ನೆ