ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇಂದು ಕಮಿಷನ್ ಪರ್ವ ಮುಂದುವರಿದಿದೆ. ಆದರೆ, ಈ ಕಮಿಷನ್ ಪರ್ವವನ್ನು ತಡೆಯುವುದಕ್ಕೆ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕೋಪಯೋಗಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಎಲ್ಲ ಇಲಾಖೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ. ಗುತ್ತಿಗೆದಾರರು ಪತ್ರ ಬರೆದಿದ್ರು, ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ್ರು. ಇಷ್ಟೆಲ್ಲ ಆದ್ರೂ ಕಮಿಷನ್ ಪರ್ವ ನಿಂತಿಲ್ಲ. ಕೇಂದ್ರ ಬಿಜೆಪಿ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಇದನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಬೇಸರ ಹೊರಹಾಕಿದರು.
ಆಡಿಯೋ ಬಿಡುಗಡೆ: ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ ಅವರು ಗುತ್ತಿಗೆ ವಿಚಾರವಾಗಿ ನಡೆಸಿರುವ ಕ್ರಮದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ, ರಾಯಚೂರಿನ ನಾರಾಯಣಪುರ ಬಲದಂಡೆ ಯೋಜನೆ ನಾಗಪ್ಪ ವಡ್ಡರ ಕಂಪನಿಗೆ ಟೆಂಡರ್ ಆಗಿದೆ. ಇವರಿಗೆ ಎರಡು ಟೆಂಡರ್ ಆಗಿವೆ. 828.40 ಕೋಟಿ ರೂ. ಮೊದಲ ಪ್ಯಾಕೇಜ್. 791 ಕೋಟಿ ರೂ. ಎರಡನೇ ಪ್ಯಾಕೇಜ್ ಬಿಡುಗಡೆ ಮಾಡಿದ್ದಾರೆ. ಒಟ್ಟು 1,619 ಕೋಟಿ ರೂ. ಮೊತ್ತದ ಪ್ಯಾಕೇಜ್ ಎರಡು ಹಂತದಲ್ಲಿ ಬಿಡುಗಡೆ ಆಗಿದೆ. ಎರಡು ಪ್ಯಾಕೇಜ್ ಗಳಲ್ಲಿಯೂ ಕಳಪೆ ಕಾಮಗಾರಿ ಆಗಿದೆ. 282 ಕೋಟಿ ರೂ. ಮೊದಲ ಹಂತಕ್ಕೆ ಹಾಗೂ ಎರಡನೇ ಹಂತಕ್ಕೆ 143 ಕೋಟಿ ರೂ. ಪಾವತಿ ಮಾಡಲಾಗಿದೆ. ಉಳಿದ ಹಣ ಪಾವತಿ ಆಗಬೇಕಿದೆ ಎಂದರು.
ವೈರಲ್ ಆಡಿಯೋ ಕುರಿತು ತನಿಖೆಗೆ ಉಗ್ರಪ್ಪ ಆಗ್ರಹ ಕೆಟ್ಟ ಸಂಭಾಷಣೆ: ಈ ಕಾಮಗಾರಿಯಲ್ಲಿ ಇಬ್ಬರು ಇಂಜಿನಿಯರ್ ಬದಲಾಗಿದ್ದಾರೆ. ಈಗ ಮೂರನೆಯವರು ಚೀಫ್ ಇಂಜಿನಿಯರ್ ಆಗಿದ್ದಾರೆ. ಇಲ್ಲಿಯೂ 40 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ. ಚೀಫ್ ಇಂಜಿನಿಯರ್ ಶಿವಕುಮಾರ್ ಹಾಗೂ ಸ್ಥಳೀಯ ಶಾಸಕ ಶಿವನಗೌಡ ನಾಯಕ್ ನಡುವೆ ಈ ಕಾಮಗಾರಿ ವಿಚಾರವಾಗಿ ದೂರವಾಣಿ ಸಂಭಾಷಣೆ ನಡೆದಿದೆ. ದೇಶದ ರಾಜಕೀಯ ಇತಿಹಾಸದಲ್ಲಿಯೇ ಇಷ್ಟೊಂದು ಕೆಟ್ಟ ಪದಗಳ ಬಳಕೆಯಾಗಿದ್ದನ್ನು ನಾನು ಇದುವರೆಗೂ ಕೇಳಿಲ್ಲ ಎಂದು ಹೇಳಿದರು.
200 ಕೋಟಿ ರೂಪಾಯಿ ನಕಲಿ ಬಿಲ್ ಬರೆದಿದ್ದೀಯ ಎಂದು ಫೋನ್ನಲ್ಲಿ ಶಿವನಗೌಡ ನಾಯಕ್ ಹೇಳಿದ್ದಾರೆ. ಈ ರೀತಿ ಅಕ್ರಮವಾಗಿ ಹಣ ಪಾವತಿ ಆಗಿದೆ ಎಂಬುದು ಗೊತ್ತಿದ್ದರೂ ಇವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡದಿರುವುದು ತಪ್ಪು. ಸಂಭಾಷಣೆಯಲ್ಲಿ ಇವರು ಇನ್ನೊಂದು ಮಾತನಾಡಿದ್ದು, ನನ್ನನ್ನು ಕೇಳಿ ಚೆಕ್ ಬರೆದಿದ್ದಿಯಾ ಎಂದು ದಬಾಯಿಸಿದ್ದಾರೆ. ಕೆಲಸ ಆಗದೇ ಬಿಲ್ ಯಾಕೆ ಬರೆದಿದ್ದಿಯಾ ಎಂದು ಕೇಳಿದ್ದನ್ನ ನನ್ನ ರಾಜಕೀಯ ಇತಿಹಾಸದಲ್ಲಿ ನೋಡಿದ್ದೇನೆ ಮತ್ತು ಕೇಳಿದ್ದೇನೆ. ಆದರೆ, ಕೆಲಸವೇ ಆಗದೆ ಬಿಲ್ ಬರೆದಿದ್ದೀಯ ಎಂದು ಕೇಳಿದವರು ಇದೇ ಮೊದಲು. ಇದರ ಸತ್ಯಾಸತ್ಯತೆಯನ್ನು ತನಿಖೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಇಲಾಖೆ ಅಧಿಕಾರಿಗಳಾಗಲಿ ಮುಖ್ಯಮಂತ್ರಿಗಳಲ್ಲಿ ಅಥವಾ ಸಂಬಂಧಿಸಿದ ಇಲಾಖೆ ಸಚಿವರಾಗಲಿ ಈ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ. ಇಲ್ಲಿ ಕೆಳಹಂತದ ಅಧಿಕಾರಿಗಳಿಂದ ಹಿಡಿದು ವಿಧಾನಸೌಧದ ಮೂರನೇ ಮಹಡಿಯವರೆಗೂ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಮೂಡುತ್ತಿದೆ. ಸರ್ಕಾರ ಮೌನಿ ಬಾಬಾ ಆಗಿದೆ. ಈ ಪ್ರಕರಣದಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಈ ಹಿನ್ನೆಲೆ ಈ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ತನಿಖೆಯನ್ನು ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು. ಮಾಧ್ಯಮಗೋಷ್ಟಿಯಲ್ಲಿ ಮಾಜಿ ಸಚಿವ ಎಚ್ಎಂ ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕರಾವಳಿಯಲ್ಲಿ ಆರೆಂಜ್ ಅಲರ್ಟ್: ನಿನ್ನೆ ವಿಮಾನ ಸಂಚಾರ ವ್ಯತ್ಯಯ, ಇಂದು ಸಹಜ ಸ್ಥಿತಿ