ಬೆಂಗಳೂರು:ಮೊನ್ನೆಯಷ್ಟೇ ನಗರದಲ್ಲಿ ತಾಯಿ-ಮಗಳನ್ನು ಬಲಿ ಪಡೆದ ಅಗ್ನಿ ಅವಘಡ ಪ್ರಕರಣ ಮಾಸುವ ಮುನ್ನವೇ ರಾಜಧಾನಿಯಲ್ಲಿ ಅದೇ ಮಾದರಿಯ ಮತ್ತೊಂದು ದುರಂತ ಜನರನ್ನು ಬೆಚ್ಚಿಬೀಳಿಸಿದೆ.
ನ್ಯೂ ತರಗುಪೇಟೆ ಮಹಾಕಾಳಿ ಅಮ್ಮನ್ ಲಾರಿ ಸರ್ವಿಸ್ ಗೋದಾಮಿನಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್ ಸ್ಫೋಟಗೊಂಡ ಕಟ್ಟಡದ ಮೇಲೆಯೇ ವಾಸವಿದ್ದ ಕುಟುಂಬದ ವೃದ್ಧೆ ಹಾಗೂ ಇಬ್ಬರು ಮಕ್ಕಳು ಬಚಾವ್ ಆಗಿದ್ದಾರೆ.
ಮನೆಯಲ್ಲಿ ಇಬ್ಬರು ಮೊಮ್ಮಕ್ಕಳೊಂದಿಗೆ ಇದ್ದ ಅಜ್ಜಿಗೆ ಭಯಾನಕ ಶಬ್ಧವೊಂದು ಕೇಳಿಸಿದೆ. ಈ ಶಬ್ಧ ಕೇಳಿ ಬೆಚ್ಚಿಬಿದ್ದ ವೃದ್ಧೆ ಹಾಗೂ ಮಕ್ಕಳು ಆತಂಕದಿಂದ ಕೂಗಾಡಿದ್ದಾರೆ. ಭಯದಿಂದ ಕಾಪಾಡಿ.. ಕಾಪಾಡಿ... ಚಿಕ್ಕಮಕ್ಕಳಿದ್ದಾರೆ ಎಂದು ವೃದ್ಧೆ ಕಿರುಚಾಡಿದ್ದಾರೆ. ಯಾರೋ ಇಬ್ಬರು ಪುಣ್ಯಾತ್ಮರು ಮೇಲೆ ಬಂದು ಅಜ್ಜಿಯನ್ನು ಹಾಗೂ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಬಂದು ಪ್ರಾಣ ಉಳಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ವೃದ್ಧೆ ಸಾರಮ್ಮ ಆ ಶಬ್ಧ ಬಹಳ ಭಯಾನಕವಾಗಿತ್ತು ಎಂದು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.