ಬೆಂಗಳೂರು: ಕಾಟನ್‌ಪೇಟೆಯಲ್ಲಿ ಆರೋಪಿಯೊಬ್ಬ ಸಿಕ್ಕ ಸಿಕ್ಕವರಿಗೆ ಚಾಕು ಇರಿದಿದ್ದೇಕೆ?, ಆತ ನಿಜಕ್ಕೂ ಮಾನಸಿಕ ಅಸ್ವಸ್ಥನಾ? ಎಂಬ ಬಗ್ಗೆ ತನಿಖೆ ನಡೆಸಿರುವ ಪೊಲೀಸರು, ಆರೋಪಿ ಉದ್ದೇಶಪೂರ್ವಕವಾಗಿ ವಿಕೃತಿ ಮೆರೆದಿದ್ದಾನೆ ಎಂದು ಹೇಳುತ್ತಿದ್ದಾರೆ.
ನಡೆದಿದ್ದೇನು?
ಆರೋಪಿ ಗಣೇಶ್ ಕುರಿ ಮಾಂಸ ತರ್ತೀನಿ ಎಂದು ಮನೆಯಿಂದ ಹೊರ ಬಂದ 8 ಜನರಿಗೆ ಚಾಕುವಿನಿಂದ ಇರಿದು ಇಬ್ಬರ ಸಾವಿಗೂ ಕಾರಣವಾಗಿದ್ದ. ಈ ಘಟನೆಯ ವೇಳೆ ಆರೋಪಿಯನ್ನು ತಡೆಯಲು ಯತ್ನಿಸಿ ವಿಫಲವಾದ ಮಟನ್ ಶಾಪ್ ಮಾಲೀಕ ಕಾಟನ್ ಪೇಟೆ ಪೊಲೀಸರಿಗೆ ಈ ವಿಚಾರ ಮುಟ್ಟಿಸಿದ್ದರು. ಕೂಡಲೇ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದ ಠಾಣಾ ಸಿಬ್ಬಂದಿ ಚೇಸ್ ಮಾಡಿ ಆರೋಪಿಯನ್ನು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ನಡೆದ ವಿಚಾರಣೆಯ ವೇಳೆ, ಆರೋಪಿಯ ತಾಯಿ ಮಗ ನಿಮ್ಹಾನ್ಸ್ನಲ್ಲಿ ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದಿದ್ದ ಎಂದು ಪೊಲೀಸರಿಗೆ ತಿಳಿಸಿದ್ದರು.
ನಿಮ್ಹಾನ್ಸ್ ಸೇರಿದ್ದ ಗಣೇಶ್ ಚಿಕಿತ್ಸೆ ಮುಗಿದ ಬಳಿಕ ಸರಿಯಾಗಿಯೇ ಇದ್ದ ಎಂಬ ಅಂಶ ಪೊಲೀಸರ ತನಿಖೆ ವೇಳೆ ದೃಢಪಟ್ಟಿದೆ. ಗಣೇಶ್ ನಾಲ್ಕೈದು ವರ್ಷದಿಂದ ಪತ್ನಿಯಿಂದ ದೂರವಿದ್ದು, ತಾಯಿ ಜೊತೆ ಅಂಜನಪ್ಪ ಗಾರ್ಡನ್ನಲ್ಲಿ ವಾಸವಾಗಿದ್ದ. ಮಾಂಸ ತರುವುದಾಗಿ ಮನೆಯಿಂದ ಹೊರಬಂದ ಗಣೇಶ್ ಮಟನ್ ಅಂಗಡಿಯಲ್ಲಿದ್ದ ಚಾಕು ತೆಗೆದು ಕಂಡ ಕಂಡವರನ್ನು ಇರಿಯುತ್ತಿದ್ದ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಯಾಕೆ ಈ ರೀತಿ ವರ್ತಿಸಿದೆ ಎಂದು ಪ್ರಶ್ನಿಸಿದರೆ, ಆತ 'ಸುಮ್ಮನೆ' ಎಂದು ಮಾನಸಿಕ ಅಸ್ವಸ್ಥನಂತೆಯೇ ಉತ್ತರ ಕೊಟ್ಟಿದ್ದಾನಂತೆ.
ಸದ್ಯ ಆರೋಪಿಯನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಹಿಂದೊಮ್ಮೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಗಣೇಶ್ ನಿಜಕ್ಕೂ ಮತ್ತೆ ಅಸ್ವಸ್ಥನಾಗಿದ್ದಾನಾ? ಅಥವಾ ಬೇಕಂತಲೇ ಹೀಗೆ ಮಾಡಿದ್ದನಾ? ಎಂದು ಮತ್ತಷ್ಟು ತನಿಖೆ ನಡೆಸಿ ಪೊಲೀಸರು ಮಾಹಿತಿ ಪಡೆಯಲಿದ್ದಾರೆ. ಗಣೇಶ್ನ ಹುಚ್ಚಾಟದಿಂದ ಚಾಕು ಇರಿತಕ್ಕೊಳಗಾಗಿದ್ದ ರಾಜೇಶ್ ಎಂಬಾತ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಈವರೆಗೆ ಇಬ್ಬರು ಸಾವಿಗೀಡಾಗಿದ್ದಾರೆ.