ಬೆಂಗಳೂರು: ಹಬ್ಬಗಳಿಗೆ ಸಾಲು ಸಾಲು ರಜೆಗಳಿದ್ದಾಗ ಖಾಸಗಿ ಬಸ್ಗಳು ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಾರಿಗೆ ಸಂಸ್ಥೆಗಳಿಂದಲೇ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ. ಎಂ ಸತೀಶ್ ಪ್ರಶ್ನೆಗೆ ಉತ್ತರಿಸಿದ ಅವರು, ಹಬ್ಬಗಳು, ಸರಣಿ ರಜೆಗಳು ಬಂದಾಗ ಖಾಸಗಿ ಬಸ್ ನವರು ಪ್ರಯಾಣ ದರವನ್ನು ಸಾಕಷ್ಟು ಹೆಚ್ಚಿಗೆ ಮಾಡುತ್ತಾರೆ. ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ಗಳನ್ನು ಸಾರಿಗೆ ನಿಗಮದಿಂದ ಒದಗಿಸಲಾಗುತ್ತದೆ ಎಂದರು.
ಹಳೆ ಬಸ್ ನವೀಕರಣಕ್ಕೆ ಆದ್ಯತೆ: ಬಿಎಂಟಿಸಿಯಲ್ಲಿರುವ ಎಲ್ಲ ಹಳೇ ಬಸ್ಗಳನ್ನು ನವೀಕರಣಗೊಳಿಸಲಾಗುತ್ತಿದೆ ಹಾಗೂ ಎಲೆಕ್ಟ್ರಿಕ್ ಬಸ್ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಅವರು ತಿಳಿಸಿದ್ದಾರೆ.
ಬಾಡಿಗೆ ಕೊಟ್ಟು ಹಣ ಸಂಪಾದಿಸಿ:ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್, ಬಿಎಂಟಿಸಿಯವರು ಯಾಕೆ ಇಷ್ಟು ಸಾಲ ಮಾಡ್ತಾರೆ? ಪಿ ಎಫ್ ಕಟ್ಟಲು ಸಾಲ ಮಾಡೋದು. ಕೋವಿಡ್ ಕಾರಣ ಹೇಳಿ ಸಾಲ ಅನ್ತಾರೆ. 351 ಜನರು ಸತ್ತಿದ್ದಾರೆ. 11 ಜನಕ್ಕೆ ಮಾತ್ರ ಪರಿಹಾರ ಸಿಕ್ಕಿದೆ. ಕಟ್ಟಡಗಳನ್ನು ಅಡಮಾನ ಇಟ್ಟಿದ್ದಾರೆ. ತಿಂಗಳಿಗೆ 74 ಕೋಟಿ ರೂ ಬಿಎಂಟಿಸಿ ಬಸ್ನಿಂದ ನಷ್ಟ ಆಗ್ತಿದೆ. ಕಟ್ಟಡಗಳನ್ನಾದರೂ ಬಾಡಿಗೆ ಕೊಟ್ಟು ಹಣ ಸಂಪಾದಿಸಿ ಎಂದರು.
ಹಲವಾರು ಅನುದಾನ ಬರಬೇಕಿದೆ:ಇದಕ್ಕೆ ಉತ್ತರಿಸಿದ ಸಚಿವ ಬಿ. ಶ್ರೀರಾಮುಲು, ಬಿಎಂಟಿಸಿಗೆ 1324 ಕೋಟಿ ರೂ. ಸಾಲ ಪಡೆದಿದ್ದೇವೆ. ಹೊಸ ಬಸ್ ಖರೀದಿ ಮಾಡಲಾಗಿದೆ. ವರ್ಕ್ ಶಾಪ್ಸ್ ಆಧುನೀಕರಣ ಮಾಡಲಾಗಿದೆ. ಈಗಾಗಲೇ 679 ಕೋಟಿ ಸಾಲ ವಾಪಸ್ ಕಟ್ಟಿದ್ದೇವೆ. 655 ಕೋಟಿ ರೂ ಬಾಕಿ ಸಾಲಕ್ಕೆ ಸರ್ಕಾರದಿಂದ ಹಲವಾರು ಅನುದಾನ ಬರಬೇಕಿದೆ ಎಂದು ಹೇಳಿದರು.
ಕಾಲಕಾಲಕ್ಕೆ ವೇತನ ಪಾವತಿ: ಕಟ್ಟಡ ಕಾರ್ಮಿಕರಿಗೆ, ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡಲು ಅನುದಾನ ಬಂದಿಲ್ಲ. ಹಂತಹಂತವಾಗಿ ಬಸ್ ನಿಲ್ದಾಣ ಅಭಿವೃದ್ಧಿ ಮಾಡಲಾಗುತ್ತದೆ. ಕೆನರಾ ಬ್ಯಾಂಕ್ನಿಂದ ಕೆಯುಡಿಎಫ್ ಬ್ಯಾಂಕ್ಗೆ ಸಾಲ ವರ್ಗಾಯಿಸಲಾಗಿದೆ. ಸಂಸ್ಥೆಯನ್ನು ಲಾಭದಾಯಕವಾಗಿ ಮಾಡಲು ಕೆಲಸ ಮಾಡುತ್ತಿದ್ದೇವೆ. ಎಲೆಕ್ಟ್ರಿಕ್ ಬಸ್ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಹಳೆ ಬಸ್ಗಳನ್ನು ನವೀಕರಣಗೊಳಿಸಲಾಗುತ್ತಿದೆ. ಎಲ್ಲಾ ಸಿಬ್ಬಂದಿಗೂ ಕಾಲಕಾಲಕ್ಕೆ ವೇತನ ಪಾವತಿಸಲಾಗುತ್ತಿದೆ ಎಂದು ಹೇಳಿದರು.
ಓದಿ:ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಕೆ ವಿಚಾರ: ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್