ಬೆಂಗಳೂರು: ವಿಕಾಸಸೌಧದಲ್ಲಿ ವಿಧಾನಪರಿಷತ್ ಶಾಸಕರುಗಳಿಗೆ ಎರಡು ದಿನಗಳ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು, ಈ ಶಿಬಿರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಗೆಚಟಾಕಿಯೊಂದಿಗೆ ಪರಿಷತ್ ಸದಸ್ಯರಿಗೆ ಪಾಠ ಮಾಡಿದರು.
ಶಿಬಿರದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಎಸ್‌ಟಿ ಅಂದ್ರೇನು ಹೇಳು ಮೊದಲು. ಜಿಎಸ್‌ಟಿ ಅಂದ್ರೆ ತಿಳಿದುಕೊಂಡಿದಿಯಾ ಇಲ್ವಾ? ಎಂದು ಜೆಡಿಎಸ್ ಎಂಎಲ್‌ಸಿ ರಮೇಶ್ ಗೌಡಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವೇಳೆ ಜಿಎಸ್‌ಟಿ ಫುಲ್ ಫಾರ್ಮ್ ಗೊತ್ತಾಗದೇ ರಮೇಶ್ ಗೌಡ ತಬ್ಬಿಬ್ಬಾದರು. ನೀನೂ ಬ್ಯುಸಿನೆಸ್ ಮಾಡ್ತೀಯಾ, ನೀನು ಬಜೆಟ್ ಮೆಂಟೇನ್ ಮಾಡ್ತಿಯೋ ಇಲ್ವೋ? ನಿಂದು ಬಜೆಟ್ ಜಾಸ್ತಿ ಆಗದಿದ್ದರೆ ನೀನೆಲ್ಲಿ ಎಂಎಲ್‌ಸಿ ಆಗುತ್ತಿದ್ದೆ ಹೇಳು ಎಂದು ನಗೆಚಟಾಕಿ ಹಾರಿಸಿದರು.
ಇದೇ ವೇಳೆ ನಿನ್ನಂತವರು ಬಂದಿರೋದ್ರಿಂದಲೇ ಖರ್ಚು ಜಾಸ್ತಿ ಆಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಂಎಲ್ ಸಿ ರಮೇಶ್ ಗೌಡ ಹಾಗೂ ಗೋವಿಂದ ರಾಜ್ ಕಾಲೆಳೆದ ಪ್ರಸಂಗ ನಡೆಯಿತು. ಎಂಎಲ್ಸಿಗಳ ಅನುದಾನ ಹೆಚ್ಚಳ ಮಾಡಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಶಾಸಕರಿಂದ ಜನ ಹೆಚ್ಚು ನಿರೀಕ್ಷೆ ಮಾಡ್ತಾರೆ, ವಿಧಾನಪರಿಷತ್ ಸದಸ್ಯರಿಂದ ಹೆಚ್ಚು ನಿರೀಕ್ಷೆ ಮಾಡಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ರಮೇಶ್ ಗೌಡ, ವಿಧಾನಸಭೆ ಸದಸ್ಯರಿಗಿಂತ ಹೆಚ್ಚು ವಿಧಾನಪರಿಷತ್ ಸದಸ್ಯರ ಖರ್ಚು ಜಾಸ್ತಿ ಆಗಿದೆ ಎಂದರು. ಆಗ ನೀನು ಜಾಸ್ತಿ ಖರ್ಚು ಮಾಡಬಹುದು, ನಿನ್ನಂತವರು ಬಂದಿರೋದ್ರಿಂದಲೇ ಖರ್ಚು ಜಾಸ್ತಿ ಆಗ್ತಿದೆ ಎಂದು ಟಾಂಗ್ ನೀಡಿದರು.