ಬೆಂಗಳೂರು :ಭಾನುವಾರ ನಗರದಲ್ಲಿ ಮುಂದುವರಿದ ಗಾಳಿ ಸಹಿತ ಭಾರಿ ಮಳೆ ಅಬ್ಬರಕ್ಕೆ ಆಂಧ್ರಪ್ರದೇಶ ಮೂಲದ ಯುವತಿ ಮೃತಪಟ್ಟಿದ್ದಾರೆ. ಇದರಿಂದಾಗಿ ಮಳೆ ಅವಘಡಕ್ಕೆ ಪ್ರಸಕ್ತ ವರ್ಷದಲ್ಲಿ ಮೊದಲ ಸಾವು ಸಂಭವಿಸಿದ ಘಟನೆ ಇದಾಗಿದೆ. ನಗರದ ಹಲವು ಕಡೆಗಳಲ್ಲಿ ಶನಿವಾರ ಮತ್ತು ಭಾನುವಾರ ಸುರಿದ ಆಲಿಕಲ್ಲು ಮಳೆಗೆ ನೂರಾರು ಮರಗಳು ಧರೆಗುರುಳಿವೆ.
ಶನಿವಾರ ಸಂಜೆಯೂ ಸುರಿದಿದ್ದ ಮಳೆಗೆ ರಸ್ತೆಗೆ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವಾಗಲೇ ಭಾನುವಾರ ಮತ್ತೆ ಅಬ್ಬರಿಸಿದ ಮಳೆಯಿಂದ ನೂರಕ್ಕೂ ಹೆಚ್ಚು ಮರಗಳು ಧರಾಶಾಹಿಯಾಗಿವೆ. ಮಧ್ಯಾಹ್ನ ವೇಳೆ ಕಗ್ಗತ್ತಲ ಕಾರ್ಮೋಡ ಆವರಿಸಿದ ಕ್ಷಣಾರ್ಧದಲ್ಲೇ ಬಿರುಗಾಳಿ ಉಂಟಾಯಿತು. ಮೊದಲು ಕುಮಾರಕೃಪ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತು ಮುಂಭಾಗದ ಚಲಿಸುತ್ತಿದ್ದ ಕಾರು-ಬೈಕ್ ಮೇಲೆ, ಮೈಸೂರು ಬ್ಯಾಂಕ್ ವೃತ್ತದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಹಾಗೂ ವಿಜಯನಗರದಲ್ಲಿ ಬಿಎಂಟಿಸ್ ಬಸ್ ಮೇಲೆ ಮರ ಬಿದ್ದಿತು. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ.
ಮಾಗಡಿ ರಸ್ತೆ, ರಾಜಾಜಿನಗರ, ಪಂಚಮಶೀಲನಗರ, ಬೆಂಗಳೂರು ಪ್ರೆಸ್ ಕ್ಲಬ್, ನಾಗರಬಾವಿ, ಸ್ಯಾಂಕಿರಸ್ತೆ, ಲಿಂಗರಾಜಪುರ, ಕ್ರೈಸೆಂಟ್ ರಸ್ತೆ, ಬಿನ್ನಿಮಿಲ್, ಬಸವನಗುಡಿ, ವಿಶ್ವೇಶ್ವರಯ್ಯಪುರ, ಜಾಲಹಳ್ಳಿ, ಇಂದಿರಾನಗರ, ಮತ್ತಿಕೆರೆ, ಮಲ್ಲೇಶ್ವರ, ಹೊಸಕೆರೆಹಳ್ಳಿ, ಹನುಮಂತ ನಗರ, ಜೆ.ಪಿ. ನಗರ, ಕೆ.ಜಿ.ರಸ್ತೆ, ಶೇಷಾದ್ರಿಪುರಂ, ಗಾಂಧಿನಗರ, ಕುಮಾರಸ್ವಾಮಿ ಲೇಔಟ್, ರಾಜರಾಜೇಶ್ವರಿನಗರ, ವಿಠಲ್ ಮಲ್ಯ ರಸ್ತೆ, ಸಂಪಂಗಿರಾಮನಗರ, ಜಯಮಹಲ್ ಪ್ಯಾಲೆಸ್ ರಸ್ತೆ, ಆರ್.ಟಿ. ನಗರ ಸೇರಿ ನಗರ ನಾನಾ ಭಾಗಗಳಲ್ಲಿ ಮರಗಳು ರಸ್ತೆಗೆ ಬಿದ್ದಿವು. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿ, ಸಂಚಾರಿ ಪೊಲೀಸರು ಮಾರ್ಗ ಬದಲಾಯಿಸಿದರು. ಮತ್ತೊಂದೆಡೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಹರಸಾಹಸಪಟ್ಟರು.
ಶಿವಾನಂದ ವೃತ್ತ ಸಂಪೂರ್ಣ ಜಲಾವೃತಗೊಂಡು ಸುಮಾರು 3 ರಿಂದ 4 ಅಡಿ ನೀರು ತುಂಬಿಕೊಂಡಿತು. ಇನ್ನು ಈ ಸಮಯದಲ್ಲಿ ಅಂಡರ್‌ಪಾಸ್‌ನಲ್ಲಿ ವಾಹನ ಸವಾರರು ತೆರಳದಂಥಹ ಪರಿಸ್ಥಿತಿ ನಿರ್ಮಾಣವಾಯಿತು. ಈ ಮಾರ್ಗದಲ್ಲಿ ಏಕಮುಖವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಯಿತು. ಪ್ಯಾಲೇಸ್ ಗುಟ್ಟಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ ಮಳೆ ನೀರಿನಿಂದ ಮುಚ್ಚಿ ಹೋಗಿ ಹಸಿರು ರಸ್ತೆಯಂತೆ ಕಂಡು ಬಂದಿತು. ಮಳೆಗೆ ಮರದ ಎಲೆಗಳು ಉದುರಿ ರಸ್ತೆ ತುಂಬಲ್ಲಾ ಹರಡಿಕೊಂಡಿದ್ದವು.
ಇನ್ನು ಮಹಾಲಕ್ಷ್ಮೀಲೌಟ್‌ನಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಒದ್ದೆಯಾದವು. ಕೆ.ಆರ್.ಪುರ, ರಾಮಮೂರ್ತಿನಗರ, ಕೌದೇನಹಳ್ಳಿ, ಐಟಿಐ ಸುತ್ತಮುತ್ತ ಧಾರಾಕಾರವಾಗಿ ಮಳೆ ಸುರಿಯಿತು. ರಾಮಮೂರ್ತಿನಗರದ ತಗ್ಗು ಪ್ರದೇಶದಲಿ ಇರುವ ಮನೆಗಳಿಗೆ ಹಾಗೂ ಅಂಗಡಿಗಳಿಗೂ ನೀರು ನುಗ್ಗಿತು. ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು. ಈವರೆಗೆ 400 ಕ್ಕೂ ಹೆಚ್ಚು ದೂರುಗಳು ಬಿಬಿಎಂಪಿ ಕಂಟ್ರೋಲ್ ರೂಂಗೆ ಬಂದಿವೆ.