ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಟಾಲಿವುಡ್ ನಟ ನಂದಮೂರಿ ತಾರಕರತ್ನ (40) ಇಂದು ನಿಧನ ಹೊಂದಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಭಾನುವಾರ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ತಾರಕರತ್ನ ಅವರಿಗೆ ಹೃದಯಾಘಾತ ಸಂಭವಿಸಿತ್ತು. ನಂತರ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿದೆ.
ಟಾಲಿವುಡ್ ಚಿತ್ರರಂಗ ಹಾಗೂ ರಾಜಕೀಯದ ಗಣ್ಯರಿಂದ ಸಂತಾಪ.. ತಾರಕರತ್ನ ಅಕಾಲಿಕ ಮರಣದಿಂದ ತೆಲುಗು ಚಿತ್ರರಂಗದ ಪ್ರಮುಖರು ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ. ತಾರಕರತ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿ, 23 ದಿನಗಳ ಜೀವಣ್ಮರಣದೊಂದಿಗೆ ಹೋರಾಡಿ ತಾರಕರತ್ನ ಇಂದು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಈಗಾಗಲೇ ಆಸ್ಪತ್ರೆಗೆ ನಂದಮೂರಿ ಕುಟುಂಬಸ್ಥರು ಆಗಮಿಸಿದ್ದಾರೆ. ಜೊತೆಗೆ ಹೆಬ್ಬಗೋಡಿ ಪೊಲೀಸರು ಆಸ್ಪತ್ರೆ ಬಳಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ನಡೆದಿದ್ದೇನು?:ಜನವರಿ 27ರಂದು ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಕೈಗೊಂಡಿದ್ದ ಪಾದಯಾತ್ರೆಯಲ್ಲಿ ನಂದಮೂರಿ ತಾರಕರತ್ನ ಭಾಗವಹಿಸಿದ್ದರು. ಸ್ವಲ್ಪ ದೂರ ಕ್ರಮಿಸಿದ ನಂತರ ತಾರಕರತ್ನ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಅವರನ್ನು ಕಾರ್ಯಕರ್ತರು ಕುಪ್ಪಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಬಳಿಕ ಚಿತ್ತೂರು ಪಟ್ಟಣದ ಪಿಇಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡಿದ್ದರು. ನಂತರ ವೈದ್ಯರು ಹಾಗೂ ಕುಟುಂಬಸ್ಥರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿತ್ತು.
ಅನಂತರ ತಾರಕರತ್ನ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿತ್ತು. ಮೂರು ಸ್ಟಂಟ್ ಹಾಕಿ ಹೃದಯ ಸಮಸ್ಯೆಯನ್ನು ತಹಬಂದಿಗೆ ತರಲಾಗಿತ್ತು. ಆದರೂ, ಮೆದುಳು ಸಮಸ್ಯೆ ಉಂಟಾಗಿತ್ತು. ಹೀಗಾಗಿ ಇದುವರೆಗೆ ತೀವ್ರ ನಿಗಾ ಘಟಕದಲ್ಲಿ ಯುವ ನಟ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಶನಿವಾರ ಬೆಳಗ್ಗೆ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಈ ಮಾಹಿತಿಯನ್ನು ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ನೀಡಿದ್ದಾರೆ. ಮಧ್ಯಾಹ್ನದ ವೇಳೆಗೆ ಹಿರಿಯ ನಟ ಬಾಲಕೃಷ್ಣ ಹಾಗೂ ಇತರ ಕುಟುಂಬಸ್ಥರು ಆಸ್ಪತ್ರೆ ತಲುಪಿದ್ದರು. ಆಗ ತಾರಕರತ್ನ ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ಸಂಪೂರ್ಣವಾಗಿ ವಿವರಿಸಿದರು. ಇದಾದ ಬಳಿಕ ರಾತ್ರಿ 10 ಗಂಟೆಗೆ ತಾರಕರತ್ನ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಇದನ್ನೂ ಓದಿ:ಕೆ.ಆರ್.ರಮೇಶ್ ಕುಮಾರ್‌ಗೆ ಪತ್ನಿ ವಿಯೋಗ: ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿ ಸಂತಾಪ