ಬೆಂಗಳೂರು :ಕೊರೊನಾ ಕರ್ಫ್ಯೂ ಹೇರಿದ್ದರಿಂದ ಬೀಗ ಹಾಕಿದ್ದ ಮನೆಗಳಿಗೆ ಕನ್ನ ಹಾಕುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ಫ್ಯೂ ಕಾರಣದಿಂದ ಮನೆಗಳಿಗೆ ಬೀಗ ಹಾಕಿ ತಮ್ಮ ತವರೂರುಗಳಿಗೆ ತೆರಳಿದ್ದರಿಂದಾಗಿ, ಅಂತಹ ಮನೆಗಳನ್ನ ಇವರು ಹೊಂಚು ಹಾಕಿ ಕನ್ನ ಹಾಕುತ್ತಿದ್ದರು.
ಕರ್ಫ್ಯೂ ಸಮಯವನ್ನೇ ಬಂಡವಾಳ ಮಾಡಿಕೊಂಡಿದ್ದ ಇವರು ಹಾಡಹಗಲೇ ಮನೆಗಳಿಗೆ ಕನ್ನ ಹಾಕುತ್ತಿದ್ದರು. ಇದೀಗ ಕೆ.ಎಸ್ ಲೇಔಟ್ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಯೋಗೀಶ್, ಯಶವಂತ್, ಮೋಹನ್ ಎಂದು ಗುರುತಿಸಲಾಗಿದೆ. ಇವರು ಕೊರೊನಾ ಹಿನ್ನೆಲೆ ಕರ್ಫ್ಯೂ ಜಾರಿಯಾದಾಗ ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದರು. ಕಳ್ಳರು ಹಗಲಲ್ಲೇ ಬಾಗಿಲು ಮುರಿದು ಹಣ, ಆಭರಣ ಸೇರಿ ವಸ್ತುಗಳನ್ನು ದೋಚುತ್ತಿದ್ದರು.
ಮನೆಯ ಮುಂದೆ ಪೇಪರ್ ಎತ್ತದೆ ಹಾಗೆಯೇ ಬಿಟ್ಟಿದ್ದರೆ ಆ ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿದು ಅಂತಹ ಮನೆಯನ್ನೇ ಕಳ್ಳತನ ಮಾಡುತ್ತಿದ್ದರು.
ಕಳ್ಳರಿಂದ ಬರೋಬ್ಬರಿ 921 ಗ್ರಾಂ ತೂಕದ ವಜ್ರ, ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿಯೇ 811 ಗ್ರಾಂ ಚಿನ್ನ ಕಳವು ಮಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ.
ಸದ್ಯ ಕುಮಾರಸ್ವಾಮಿಲೇಔಟ್, ಬನಶಂಕರಿ, ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಕೇಸ್ ಪತ್ತೆಯಾಗಿದ್ದು, ಹಲವು ಠಾಣೆಗಳಲ್ಲಿ ಅನೇಕ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ದೊರೆತಿದೆ.