ಬೆಂಗಳೂರು : ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ನೀಲಾದ್ರಿ ಬಳಿಯ ಕ್ವಾರಿಯಲ್ಲಿ ಈ ಘಟನೆ ನಡೆದಿದ್ದು, ಮೂವರೂ 10 ನೇ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ವಿದ್ಯಾರ್ಥಿಗಳನ್ನು ಕಿರಣ್ (13) ತೀರ್ಥ(13) ಹಾಗೂ ಫೈಜಲ್ (14) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಆಟ ಆಡಲು ಹೋಗಿದ್ದ ತೀರ್ಥ ಮತ್ತು ಫೈಜಲ್ ರಾತ್ರಿ ಆದರೂ ಮನೆಗೆ ಬಾರದ ಹಿನ್ನೆಲೆ ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಇದಾದ ನಂತರ ಕೆರೆ ಬಳಿ ಬಾಲಕರ ಸೈಕಲ್, ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಗಿವೆ. ಈಜು ಬಾರದಿದ್ದರು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಈಜುಕೊಳದಲ್ಲಿ ಬಾಲಕರು ಮುಳಗಿ ಸಾವು :ದಾವಣಗೆರೆಯದೇವರಾಜ ಅರಸು ಬಡಾವಣೆಯಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ನವೀಕರಣಗೊಂಡು ಲೋಕಾರ್ಪಣೆಯಾಗಿದ್ದ ಈಜುಕೊಳಕ್ಕೆ ಈಜಲು ತೆರಳಿದ್ದ ಬಾಲಕರಿಬ್ಬರು ಮೇ 19 ರಂದು ಮುಳುಗಿ ಸಾವನ್ನಪ್ಪಿದ್ದರು. ಮೃತರನ್ನು ದಾವಣಗೆರೆ ನಗರದ ಬೀಡಿ ಲೇಔಟ್ನ ನಿವಾಸಿಗಳೆಂದು ಗುರುತಿಸಲಾಗಿತ್ತು.
ಈಜುಕೊಳಕ್ಕಾಗಮಿಸಿದ ಇಬ್ಬರು ಬಾಲಕರಿಗೆ ಈಜು ಬಾರದ ಹಿನ್ನೆಲೆ ಸಾವನ್ನಪ್ಪಿದ್ದರು. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯಬಾರದೆಂದು ಈಜುಕೊಳಕ್ಕೆ ಮಾರ್ಗದರ್ಶಕರನ್ನು ನಿಯೋಜನೆ ಮಾಡಲಾಗುತ್ತದೆ. ಆದರೆ ಇಲ್ಲಿ ಯಾವ ಮಾರ್ಗದರ್ಶಕರು ಹಾಗೂ ತರಬೇತಿದಾರರು ಇಲ್ಲದಿರುವುರಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.
ನಾಲ್ವರು ಸ್ನೇಹಿತರು ನೀರುಪಾಲು:ನಂದಿ ಬೆಟ್ಟ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ಯುವಕರು ನೀರು ಪಾಲಾಗಿರುವ ಘಟನೆ ಬೆಂಗಳೂರಿನ ದೇಹನಹಳ್ಳಿ ಸಮೀಪದ ರಾಮನಾಥಪುರ ಕೆರೆಯಲ್ಲಿ ಮೇ. 27 ಭಾನುವಾರ ದಂದು ನಡೆದಿತ್ತು. ಬೈಕ್ನಲ್ಲಿ ಬಂದಿದ್ದ ಯುವಕರು ಬೆಂಗಳೂರಿಗೆ ವಾಪಸ್ ಮರಳುತ್ತಿರುವಾಗ ದಾರಿ ಮಧ್ಯೆ ಸಿಕ್ಕ ಕೆರೆಯಲ್ಲಿ ಈಜಲು ಹೋಗಿದ್ದರು. ಈ ಸಂದರ್ಭದಲ್ಲಿ ನಾಲ್ವರು ಕೂಡ ನದಿನಲ್ಲಿ ಮುಳಗಿ ಸಾವನ್ನಪ್ಪಿದ್ದರು. ಇನ್ನು ವಿಷಯ ತಿಳಿದು ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನೀರಿನಲ್ಲಿ ಮುಳುಗಿರುವ ಶವಗಳನ್ನು ಮೇಲೆತ್ತಿದ್ದರು.
ಬಿಹಾರದಲ್ಲಿ ಐವರು ನೀರಿನಲ್ಲಿ ಮುಳಗಿ ದುರ್ಮರಣ : ಬಿಹಾರದ ಗಂಡಕ್ ನದಿಯಲ್ಲಿ ಈಜಲು ಹೋಗಿದ್ದ ಐವರು ಹುಡುಗರು ನೀರು ಪಾಲಾಗಿರುವ ದುರ್ಘಟನೆ ಇದೇ ತಿಂಗಳ 5ನೇ ತಾರೀಖಿನಂದು ನಡೆದಿತ್ತು. ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಷ್ಣುಪುರದ ಅಹೋಕ್ ಗಂಡಕ್ ನದಿಯಲ್ಲಿ ಘಟನೆ ಜರುಗಿತ್ತು. ಒಟ್ಟು 9 ಮಂದಿ ಹುಡುಗರು ಈಜಲು ಹೋಗಿದ್ದರು. ಈ ಪೈಕಿ ನಾಲ್ವರು ಹೊರಗೆ ಬಂದಿದ್ದರು. ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮುಳುಗಿದವರಲ್ಲಿ ಮೂವರು ಬಾಲಕರು, ಮುಂಗೇರ್ ಮತ್ತು ಮಾಧೇಪುರ ಜಿಲ್ಲೆಯವರಾಗಿದ್ದಾರೆ. ಇಬ್ಬರು ಹುಡುಗರು ವಿಷ್ಣುಪುರ ಅಹೋಕ್ ನಿವಾಸಿಗಳು. ಎಲ್ಲಾ ಬಿಶನ್‌ಪುರ ಗ್ರಾಮದಲ್ಲಿ ನಡೆಯಲಿರುವ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು.
ಇದನ್ನೂ ಓದಿ :ಮಾಂಸದ ಅಂಗಡಿಯ ಕಾರ್ಮಿಕನ ಕೊಲೆ: ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ