ಬೆಂಗಳೂರು: ರಾಜ್ಯದಲ್ಲಿ ಸೋಮವಾರ 125 ಜನರಲ್ಲಿ ಕೊರೊನಾ ರೂಪಾಂತರಿ ತಳಿ ಸೋಂಕು ಕಾಣಿಸಿಕೊಂಡಿದೆ. ಹಾಸನ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ನಗರದಲ್ಲಿ ತಲಾ ಒಬ್ಬರು ಸೋಂಕಿಗೆ ಮೃತಪಟ್ಟಿದ್ದಾರೆ.
ಸದ್ಯ 436 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 400 ಮಂದಿ ಗೃಹ ಆರೈಕೆಯಲ್ಲಿದ್ದಾರೆ. 36 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನ ಐಸಿಯು ಹಾಗೂ 29 ಜನ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 94, ಮೈಸೂರಿನಲ್ಲಿ 13, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ತಲಾ 5, ವಿಜಯನಗರ ಮತ್ತು ಶಿವಮೊಗ್ಗದಲ್ಲಿ ತಲಾ 2 ಹಾಗೂ ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.
ನಾಳೆ ಸಂಪುಟ ಉಪ ಸಮಿತಿ ಸಭೆ:ಕೋವಿಡ್ ಸೋಂಕು ಹೆಚ್ಚುತ್ತಿದ್ದು ಸುಮಾರು 34 ಜನ ಕೋವಿಡ್ ಸೋಂಕಿತರಿಗೆ JN.1 ಪಾಸಿಟಿವ್ ಬಂದಿದೆ. ಹಾಗಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸುವ ಕುರಿತು ನಾಳೆ ಕೋವಿಡ್ ನಿರ್ವಹಣೆಗೆ ರಚಿಸಿರುವ ಸಂಪುಟ ಉಪ ಸಮಿತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸಭೆಯಲ್ಲಿ ಜೆಎನ್ 1 ಪ್ರಕರಣಗಳೂ ಸೇರಿದಂತೆ, ಕೋವಿಡ್ ನಿಯಂತ್ರಣ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಉತ್ತಮ ಎಂಬುದು ಸಲಹೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರು, ಇತರ ಕಾಯಿಲೆ ಹೊಂದಿದವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದರು.
ನಿರ್ಬಂಧ ಇಲ್ಲ:JN.1 ವಿಚಾರದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವ ಬಗ್ಗೆ ಯಾವುದೇ ಚಿಂತನೆಗಳಿಲ್ಲ. ಸಂಪುಟ ಉಪ ಸಮಿತಿ ಸಭೆಯಲ್ಲಿ ತಜ್ಞರೊಂದಿಗೂ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ 34 JN.1 ಸೋಂಕಿತರು ಪತ್ತೆ, ನಾಳೆ ಸಂಪುಟ ಉಪ ಸಮಿತಿ ಸಭೆ: ಸಚಿವ ದಿನೇಶ್ ಗುಂಡೂರಾವ್