ವೈಟ್ ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಬೆಂಗಳೂರು: ದಾಳಿ ವೇಳೆ ಬೆಂಗಳೂರಿನಲ್ಲಿ ಪತ್ತೆಯಾದ ಮೂವರು ಬಾಂಗ್ಲಾದೇಶದ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳು ಬೆಳ್ಳಂದೂರು ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಅಬ್ಧುಲ್ ಖಾದರ್, ಮೊಹಮ್ಮದ್ ಜಾಹೀದ್ ಹಾಗೂ ಖಲೀಲ್ ಚಪ್ರಾಸಿ ವಶಕ್ಕೆ ಪಡೆಯಲಾದ ಆರೋಪಿಗಳು. ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣವೊಂದರ ತನಿಖೆಯ ಭಾಗವಾಗಿ ಸೋಮವಾರ ಎನ್ಐಎ ತನಿಖಾಧಿಕಾಧಿಕಾರಿಗಳ ತಂಡ ಬೆಂಗಳೂರಿಗೆ ಭೇಟಿ ನೀಡಿತ್ತು.
ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುವಾಗ ಮಾನ್ಯವಾದ ವೀಸಾ, ಪಾಸ್‌ಪೋರ್ಟ್ ಇರದೇ ಅಕ್ರಮವಾಗಿ ನೆಲೆಸಿದ್ದ ಮೂವರು ಬಾಂಗ್ಲಾ ಪ್ರಜೆಗಳು ಪತ್ತೆಯಾಗಿದ್ದರು. ಎನ್ಐಎ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ವೈಟ್ ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಮಾತನಾಡಿ," ಎನ್ಐಎ ಅಧಿಕಾರಿಗಳು ನಮಗೊಂದು ದೂರನ್ನು ಕೊಟ್ಟಿದ್ದಾರೆ. ಎನ್ಐಎ ಅಧಿಕಾರಿಗಳು ಅವರ ತನಿಖೆಗಾಗಿ ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಗೆ ಬಂದಾಗ ಅಬ್ಧುಲ್ ಖಾದರ್, ಮೊಹಮ್ಮದ್ ಜಾಹೀದ್ ಹಾಗೂ ಖಲೀಲ್ ಚಪ್ರಾಸಿ ಎಂಬ ಮೂವರು ಬಾಂಗ್ಲಾದೇಶದ ಪ್ರಜೆಗಳು ಪತ್ತೆಯಾಗಿದ್ದಾರೆ. ಇದರಲ್ಲಿ ಅಬ್ಧುಲ್ ಖಾದರ್ ಮತ್ತು ಖಲೀಲ್ ಚಪ್ರಾಸಿ 2012ರಲ್ಲಿ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬಂದು ನೆಲಸಿ ಕಸ ಆಯುವ ಕೆಲಸವನ್ನು ಮಾಡಿಕೊಂಡಿದ್ದರು" ಎಂದರು.
"ಇವರನ್ನು ಎನ್ಐಎ ಅಧಿಕಾರಿಗಳು ನಿನ್ನೆ ನಮ್ಮ ವಶಕ್ಕೆ ನೀಡಿದ್ದಾರೆ. ಯಾಕೆಂದರೆ ಎನ್ಐಎ ತನಿಖೆಗೆ ಇವರ ಅವಶ್ಯಕತೆ ಇಲ್ಲದಿರುವುದರಿಂದ ಮತ್ತು ಅಕ್ರಮ ವಲಸಿಗರು ಎಂದು ನಮ್ಮ ವಶಕ್ಕೆ ನೀಡಿದ್ದಾರೆ. ನಾವು ಈ ಮೂವರ ವಿರುದ್ಧ ಪಾಸ್‌ಪೋರ್ಟ್ ಆಕ್ಟ್ ಮತ್ತು ಫಾರಿನರ್ಸ್ ಆಕ್ಟ್ನಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದರು.
ಪ್ರಿಯಕರನೊಂದಿಗೆ ನೆಲೆಸಿದ್ದ ಪಾಕ್ ಯುವತಿ ಸ್ವದೇಶಕ್ಕೆ ಹಸ್ತಾಂತರ:ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮೂಲದ ಯುವತಿಯನ್ನು ಗಡಿಪಾರು ಮಾಡಿ ಪಾಕ್ ಅಧಿಕಾರಿಗಳಿಗೆ ಪೊಲೀಸರು ಒಪ್ಪಿಸಿದ್ದರು. ನಗರದ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಿಯಕರನೊಂದಿಗೆ ನೆಲೆಸಿದ್ದ ಇಕ್ರಾ ಜೀವನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜನವರಿ 19 ರಂದು ಉತ್ತರ ಪ್ರದೇಶದ ಮುಲಾಯಂ ಸಿಂಗ್ ಜೊತೆ ಬೆಂಗಳೂರಿಗೆ ಬಂದಿದ್ದ ಇಕ್ರಾಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಸುಪರ್ದಿಗೆ ಒಪ್ಪಿಸಲಾಗಿತ್ತು.
ಇಕ್ರಾ ಪಾಕ್ ಪ್ರಜೆ ಎಂಬುದು ಸಾಬೀತಾದ ಹಿನ್ನೆಲೆ ವಿದೇಶಾಂಗ ಇಲಾಖೆಯ ಸಹಾಯದೊಂದಿಗೆ ಬೆಳ್ಳಂದೂರು ಪೊಲೀಸರು ವಾಘಾ – ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳಿಗೆ ಆಕೆಯನ್ನು ಒಪ್ಪಿಸಿದ್ದರು. ತವರು ದೇಶಕ್ಕೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಇಕ್ರಾ ತನ್ನನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಅಂಗಲಾಚಿದ ಪ್ರಸಂಗ ನಡೆದಿತ್ತು. ಆದರೆ ಆಕೆಯ ಮನವೊಲಿಸಿ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ:ಅಂತಾರಾಜ್ಯ ಡ್ರಗ್ ಪೆಡ್ಲ್ರ್ಗಳೊಂದಿಗೆ ನಂಟು ಆರೋಪ: ಹುಬ್ಬಳ್ಳಿ ಮೂಲದ ಯುವಕನನ್ನು ಬಂಧಿಸಿದ ತಮಿಳುನಾಡು ಪೊಲೀಸರು